ಬೆಳ್ತಂಗಡಿ: ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ 17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಜಾತ್ರಾ ಸ್ಥಳದಲ್ಲಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮಾರ್ಚ್ 11ರಂದು ಸಂಜೆ, ಬಾಲಕನು ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದನು. ಈ ವೇಳೆ ಅಲ್ಲಿ ಇದ್ದ ಕೆಲವರು, ಅನ್ಯ ಧರ್ಮದ ಬಾಲಕನು ತಮ್ಮ ಧರ್ಮದ ಹುಡುಗಿಯರೊಂದಿಗೆ ಜಾತ್ರೆಗೆ ಬಂದಿದ್ದಾನೆ ಎಂದು ಅಕ್ಷೇಪ ವ್ಯಕ್ತಪಡಿಸಿ, ಅವನಿಗೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಆರೋಪಿಗಳು ಬಾಲಕನನ್ನು ಬೈಕ್‌ನಲ್ಲಿ ಬೇರೆಡೆಗೆ ಕರೆದೊಯ್ದು ಮತ್ತಷ್ಟು ಹಲ್ಲೆ ನಡೆಸಿದ್ದು, ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿದ್ದಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿ ಅದರ ವಿಡಿಯೋ ದಾಖಲಿಸಿಕೊಂಡು ಬಳಿಕ ಅವನನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆ ಬಳಿಕ ಬಾಲಕನು ಕೆಲವು ದಿನಗಳಿಂದ ಭಯಭೀತನಾಗಿದ್ದನು. ಈ ಹಿನ್ನೆಲೆಯಲ್ಲಿ, ಬಾಲಕನ ತಂದೆ ಮಾರ್ಚ್ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 30/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 137(2), 115(2), 351(2), 352, 353(2) ಹಾಗೂ 190ರಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

























