ಪುತ್ತೂರು: ಐತಿಹಾಸಿಕ ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳದ ಕರೆಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಹಳೆಯ ಕರೆಗೆ ಇತ್ತೀಚೆಗಷ್ಟೆ ಮಣ್ಣು ತುಂಬಿಸುವ ಮೂಲಕ ಕಂಬಳ ಕರೆ ಇತಿಹಾಸದ ಪುಟ – ಸೇರಿತ್ತು. ಇದೀಗ ಕಂಬಳದ ಬೃಹತ್ ವೇದಿಕೆಯನ್ನೂ ತೆರವುಗೊಳಿಸಲಾಗಿದೆ.
ಜ.24ರಂದು 33ನೇ ವರ್ಷದ ಕೋಟಿಚೆನ್ನಯ ಜೋಡುಕರೆ ಕಂಬಳವು ವಿಜೃಂಭಣೆಯಿಂದ ನಡೆದಿತ್ತು. ಅದಾದ ಬಳಿಕ ಕರೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರೆ ಸ್ಥಳಾಂತರಕ್ಕೆ ಸಿದ್ದತೆ ನಡೆಸಲಾಯಿತು. ಆರಂಭದಲ್ಲಿ ಹಳೆಯ ಕರೆಗಳಿಗೆ ಮಣ್ಣು ತುಂಬಿಸುವ ಕೆಲಸ ಮಾಡಿ ಅಲ್ಲಿ ಕಂಬಳದ ಕರೆ ಇತ್ತು ಎಂಬುದರ ಗುರುತಿಗಾಗಿ ಕರೆಯ ಬದಿಯಲ್ಲಿ ನೀರು ಚಿಮ್ಮುವ ನಿಶಾನೆಗೆ ಅಳವಡಿಸಿದ ಕಂಬ ಮಾತ್ರವಿತ್ತು.ಇದರ ಜೊತೆಗೆ ಕಂಬಳದ ಬೃಹತ್ ವೇದಿಕೆಯೂ ಇತ್ತು. ಇದೀಗ ವೇದಿಕೆಯನ್ನು ಕೂಡಾ ತೆರವು ಮಾಡಲಾಗಿದೆ.
ಏಕಕಾಲದಲ್ಲಿ 50ಕ್ಕೂ ಅಧಿಕ ಮಂದಿ ಕೂತುಕೊಳ್ಳುವ ಕಂಬಳದ ಬೃಹತ್ ವೇದಿಕೆಯಲ್ಲಿ ಕಂಬಳದ ಸಭಾ ಕಾರ್ಯಕ್ರಮವಲ್ಲದೆ ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದೆ. ಕಂಬಳದ ಕಾರ್ಯಕ್ರಮದ ಬಳಿಕ ಬೇರೆ ಬೇರೆ ದಿನಗಳಲ್ಲಿ ಯಕ್ಷಗಾನ, ಹಿಂದೂ ಸಮಾಜೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಇತಿಹಾಸವಿದೆ.ಇದರ ಜೊತೆಗೆ ಒಂದು ಹಂತದಲ್ಲಿ ಪುತ್ತೂರು ಜಾತ್ರೆ ಸಂದರ್ಭ ನಿರಂತರ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವೂ ಇದೇ ವೇದಿಕೆಯಲ್ಲಿ ನಡೆದಿತ್ತು.


























