ಉಡುಪಿ: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ ಜೋರಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ತಾನು ಸಲ್ಲಿಸಿದ ಸಿಂಗಲ್ ಲೇಔಟ್ ಅರ್ಜಿಗೆ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗುತ್ತಿದೆ ಎಂದು ಭಟ್ ಆರೋಪಿಸಿದ್ದಾರೆ.
2024ರ ಮಾರ್ಚ್ 20ರಂದು ಅರ್ಜಿ ಸಲ್ಲಿಸಿದ್ದರೂ, ಮೂರು ತಿಂಗಳಲ್ಲಿ ಸಿಗಬೇಕಿದ್ದ ಅನುಮತಿ ಎರಡು ವರ್ಷವಾದರೂ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಶಾಸಕರ ಒತ್ತಡದಿಂದಲೇ ಅನುಮತಿ ನೀಡುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದಲ್ಲದೆ, ಹೈಕೋರ್ಟ್ 30 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ ಎನ್ನುವುದು ಅವರ ಮತ್ತೊಂದು ಆಕ್ಷೇಪ. ಸಿ.ಆರ್.ಝೆಡ್, ಜೋನ್ ಚೇಂಜ್ ಹಾಗೂ ಕಮರ್ಷಿಯಲ್ ಕನ್ವರ್ಷನ್ ಸೇರಿದಂತೆ ಅಗತ್ಯ ಅನುಮತಿಗಳು ಈಗಾಗಲೇ ಲಭಿಸಿದ್ದರೂ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಕ್ರಿಯೆ ತಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆ ಶಾಸಕನ ಧೋರಣೆಯನ್ನು ಖಂಡಿಸಿ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ನಿರಂತರ ಧರಣಿ ನಡೆಸುವುದಾಗಿ ರಘುಪತಿ ಭಟ್ ಘೋಷಿಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ಇದು ರಾಜಕೀಯ ಹೋರಾಟವಲ್ಲ, ವೈಯಕ್ತಿಕ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಎಂದು ಹೇಳಿಕೊಂಡಿದ್ದಾರೆ.
ಉಡುಪಿಯಲ್ಲಿ ಇಂತಹ ರಾಜಕೀಯ ದ್ವೇಷದ ಘಟನೆಗಳು ಹಿಂದೆ ಕಂಡಿಲ್ಲ ಎಂದ ಅವರು, ಬೇರೆ ಪಕ್ಷದವರಾದರೂ ವೈಯಕ್ತಿಕ ಉದ್ಯಮಕ್ಕೆ ಅಡ್ಡಿಪಡಿಸುವ ಸಂಪ್ರದಾಯ ಇಲ್ಲ ಎಂದಿದ್ದಾರೆ. ಇನ್ನು, ಯಶ್ ಪಾಲ್ ಸುವರ್ಣ ಶಾಸಕರಾಗಲು ತಾನು ಸಹಕಾರ ನೀಡಿದ್ದೇನೆ ಎಂದು ಹೇಳಿದ ಭಟ್, ಈಗ ಅದೇ ವ್ಯಕ್ತಿಯಿಂದ ಅಡಚಣೆ ಎದುರಿಸುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.



























