ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 22, 2026ರಂದು ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರಿನ ಫೀಜಾ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿತು. ಈ ವೇಳೆ ಕಸಬ ಬೆಂಗ್ರೆ ನಿವಾಸಿಯಾದ ಮೊಹಮ್ಮದ್ ಝಾಕೀರ್ ಎಂಬಾತನು ಎಮ್‌ಡಿಎಮ್‌ಎ ಮಾದಕ ವಸ್ತುವನ್ನು ತನ್ನ ಗಿರಾಕಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಯಿತು.
ದಾಳಿಯ ವೇಳೆ ಆರೋಪಿಯನ್ನು ವಶಕ್ಕೆ ಪಡೆದು, ಅವನಿಂದ ಸುಮಾರು ₹1,06,000 ಮೌಲ್ಯದ 10.6 ಗ್ರಾಂ ತೂಕದ ನಿಷೇಧಿತ ಎಮ್‌ಡಿಎಮ್‌ಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ಸ್ಯಾಮ್ಸಂಗ್ ಮೊಬೈಲ್ ಫೋನ್, ತೂಕಮಾಪನ ಯಂತ್ರ, ಸ್ಮೋಕ್ ಟ್ಯೂಬ್, ಸಿರಿಂಜ್, ಸಿಗರ್ ಲೈಟರ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಸೇರಿದಂತೆ ಇತರೆ ವಸ್ತುಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 25/2026ರಡಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(c), 22, 22(b) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



























