ಸುಳ್ಯ ಠಾಣಾ ವ್ಯಾಪ್ತಿಯ ಮಾಪಳಡ್ಕದಲ್ಲಿರುವ ದರ್ಗಾ ಶೆರೀಪ್ ಎಂಬ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಮಾರ್ಚ್ 24ರ ಮಧ್ಯರಾತ್ರಿ ವೇಳೆ ಗೋರಿಯೊಂದಕ್ಕೆ ಹಾನಿಯಾಗಿರುವ ಘಟನೆ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಕೇರಳ ಗಡಿಭಾಗದ ಪರಪ್ಪು ನಿವಾಸಿಯಾಗಿರುವ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಈ ಕೃತ್ಯವನ್ನು ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಸಂಬಂಧಪಟ್ಟ ಧಾರ್ಮಿಕ ಶ್ರದ್ಧಾ ಕೇಂದ್ರದ ಪದಾಧಿಕಾರಿಗಳು ಮತ್ತು ಆರೋಪಿಯ ಮನೆಯವರ ನಡುವೆ ಮಾತುಕತೆ ನಡೆದಿದ್ದು, ವಿಚಾರವನ್ನು ಪರಸ್ಪರ ಸಮಜಾಯಿಷಿ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ.
ಆರೋಪಿಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣ ದಾಖಲಿಸುವುದನ್ನು ತಪ್ಪಿಸಲು ಧಾರ್ಮಿಕ ಕೇಂದ್ರದ ಪದಾಧಿಕಾರಿಗಳು ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.


























