ಉಳ್ಳಾಲದ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೆಳ್ಳಂಬೆಳಗ್ಗೆ ನಡೆದ ರೌಡಿಶೀಟರ್ ಆರಿಫ್ ಅಲಿಯಾಸ್ ‘ಟಾಬ್ಲೆಟ್ ಆರಿಫ್’ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರಿಫ್ ಅವರನ್ನು ಬೈಕ್‌ನಿಂದ ಕೆಡವಿದ ಬಳಿಕ ದುಷ್ಕರ್ಮಿಗಳು ಹತ್ಯೆಗೈದು ಕಾರಿನಲ್ಲಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ತನಿಖೆಯನ್ನು ಚುರುಕುಗೊಳಿಸಿದ್ದರು.
ಈ ನಡುವೆ ಬುಡೋಳಿಯಲ್ಲಿ ಸಂಶಯಾಸ್ಪದ ಕಾರು ಇರುವ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ವಿಟ್ಲ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಅವರ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಕಾರನ್ನು ವಶಪಡಿಸಿಕೊಂಡಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.


























