ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವ ಕಾಮೆಂಟ್ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಘಟನೆ 2026ರ ಜನವರಿ ತಿಂಗಳಲ್ಲಿ ನಡೆದಿದ್ದು, ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಿರಾತ್ (ಕುರಾನ್ ಪಠಣ) ಸ್ಪರ್ಧೆಯ ವಿಡಿಯೋ ಉದಯವಾಣಿ ಫೇಸ್‌ಬುಕ್ ಪುಟದಲ್ಲಿ ಪ್ರಸಾರವಾಗುತ್ತಿದ್ದ ವೇಳೆ, ಗಣೇಶ್ ಪ್ರಸಾದ್ ಎಂಬಾತ ತನ್ನ ಫೇಸ್‌ಬುಕ್ ಖಾತೆಯಿಂದ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2026ರಂತೆ ಬಿ.ಎನ್.ಎಸ್ ಕಲಂ 196 ಮತ್ತು ಐಟಿ ಕಾಯ್ದೆಯ 66ನೇ ವಿಧಿಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ, ಕೋಮು ಪ್ರಚೋದಕ ಕಾಮೆಂಟ್ ಹಾಕಿದ ವ್ಯಕ್ತಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿಯಾದ ಗಣೇಶ್ ಪ್ರಸಾದ್ (41) ಎಂದು ಪತ್ತೆಯಾಗಿದೆ. ಆರೋಪಿಯನ್ನು ಮಾರ್ಚ್ 27, 2026ರಂದು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಲುವಾಗಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.



























