ನೆಲ್ಯಾಡಿ: ತಿಂಡಿಯ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಉದ್ಯಮಿಯೋರ್ವರು ಚಿಕಿತ್ಸೆ ಫಲಿಸದೆ ಮಾ.29ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿ ಪ್ರದೇಶದಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದ, ಮೂಲತಃ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಬಿ. ಸುದೀಪ್ ರೈ (36) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ ಮಾ. 17ರಂದು ತಿಂಡಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸುದೀಪ್ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಧನರಾದರು.
ಸುದೀಪ್ ರೈ ಅವರು ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ SRN ಗ್ರೂಪ್ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಹಾಗೂ ಸೋಲಾರ್ ಉದ್ಯಮವನ್ನು ನಡೆಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಮೃತರ ತಂದೆ ದಾಮೋದರ ರೈ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



























