ಬೆಳ್ತಂಗಡಿ: ಕ್ರಿಕೆಟ್ ಆಡುವಾಗ ನಡೆದ ಸಣ್ಣ ವಾಗ್ವಾದ ವಿಕೋಪಕ್ಕೆ ತಿರುಗಿ, ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಕ್ಕೇನ ಎಂಬಲ್ಲಿ ಮಾ. 29ರಂದು ಸಂಜೆ ನಡೆದಿದೆ.
ಲಾಯಿಲ ಗ್ರಾಮದ ಹಕ್ಕೀಂ ಎಂಬವರಿಗೆ ಸೇರಿದ ಖಾಸಗಿ ಜಾಗದಲ್ಲಿ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದರು. ಮಾ. 27 ರಂದು ಆಟದ ವೇಳೆ ಆರೋಪಿ ಆರೀಫ್ (25) ಮತ್ತು ರಿಯಾಜ್ ಎಂಬವರ ನಡುವೆ ಜಗಳ ನಡೆದಿತ್ತು.
ಈ ಸಂದರ್ಭದಲ್ಲಿ ಆಸಿಫ್ (36) ಎಂಬವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ಆರೀಫ್, ಆಸಿಫ್ಗೆ ಮೊಬೈಲ್ನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ.ಮಾ. 29ರಂದು ಸಂಜೆ ಮತ್ತೆ ಕ್ರಿಕೆಟ್ ಆಡಲು ಬಂದಾಗ, ಆಸಿಫ್ ಈ ಬೆದರಿಕೆ ಸಂದೇಶದ ಬಗ್ಗೆ ಆರೀಫ್ನನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆರೀಫ್, ತಕ್ಷಣ ಮನೆಗೆ ಹೋಗಿ ಕತ್ತಿಯೊಂದಿಗೆ ಮರಳಿದ್ದಾನೆ. ಆರೋಪಿಯನ್ನು ಕಂಡು ಆಸಿಫ್ ಜೀವಭಯದಿಂದ ಓಡಲಾರಂಭಿಸಿದರೂ, ಬೆನ್ನಟ್ಟಿ ಬಂದ ಆರೀಫ್ ಆತನ ತಲೆಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಅಲ್ಲದೆ, “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗೆ ದಾಖಲು: ದಾಳಿಯಿಂದ ಗಂಭೀರ ಗಾಯಗೊಂಡ ಆಸಿಫ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಆರೀಫ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ.
ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಲಂ 352, 351(3), 109 ರಡಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಾ. 30ರಂದು ಆರೋಪಿ ಆರೀಫ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


























