ಬಂಟ್ವಾಳ: ಮಾರ್ಚ್ 30ರ ಸಂಜೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನೆಹರೂನಗರದಲ್ಲಿ ಕೆಲವರು ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದರು.
ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿರವರ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ, ಮೈದಾನದಲ್ಲಿ ನಿಲ್ಲಿಸಿದ್ದ KA-19-AE-6387 ಸಂಖ್ಯೆಯ ಕಾರಿನಲ್ಲಿ ಕೆಲವರು ಇದ್ದರು. ಪೊಲೀಸರನ್ನು ಗಮನಿಸಿದ ತಕ್ಷಣ ಅವರು ಪರಾರಿಯಾಗಲು ಯತ್ನಿಸಿದರು.
ಈ ವೇಳೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಸಜಿಪ ಮೂಡ ನಿವಾಸಿ ಶಾಕೀರ್ (28) ಎಂದು ತಿಳಿದುಬಂದಿದೆ. ತನಗೆ ಜೊತೆಯಾಗಿ ಅಸೀಪ್, ಸಿದ್ದಿಕ್ ಹಾಗೂ ಇರ್ಷಾದ್ ಎಂಬವರುಗಳೊಂದಿಗೆ ಮಾದಕ ವಸ್ತು ಸೇವಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಶಾಕೀರ್ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 41/2026ರಡಿ NDPS ಕಾಯ್ದೆ 1985ರ ಕಲಂ 27(a) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.



























