ಚಿಕ್ಕಮಗಳೂರು: ಜಿಲ್ಲೆಯ ಹೊಸಪೇಟೆ ಗ್ರಾಮದ ಸಂತೆ ಮೈದಾನದಲ್ಲಿ ಪುಸ್ತಕಗಳನ್ನು ಹಂಚುವ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಮಂಗಳವಾರ (ಮಾ.31) ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಮೂಲದ ಓರ್ವ ವೃದ್ಧ ಮತ್ತು ಮಧ್ಯವಯಸ್ಕ ವ್ಯಕ್ತಿ ಹೊಸಪೇಟೆ ಗ್ರಾಮದ ಸಂತೆಯಲ್ಲಿ ‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’ ಎಂಬ ಪುಸ್ತಕಗಳನ್ನು ಹಂಚುತ್ತಿದ್ದರು. ಮನೆ-ಮನೆಗೆ ತೆರಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಬ್ಬರಿಗೂ ‘ಧರ್ಮದೇಟು’ ನೀಡಿದ್ದಾರೆ.
ಜನರು ಪ್ರಶ್ನೆ ಮಾಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ತಮ್ಮ ಓಮ್ನಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬೈಕ್‌ನಲ್ಲಿ ಚೇಸ್ ಮಾಡಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ವೇಳೆ “ನೀವು ಕನ್ವರ್ಟ್ ಆಗಿದ್ದೀರಲ್ಲವೇ? ವಾಪಸ್ ಹಿಂದೂ ಧರ್ಮಕ್ಕೆ ಬನ್ನಿ” ಎಂದು ಕಾರ್ಯಕರ್ತರು ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿದ್ದ ಸುಮಾರು 2000ಕ್ಕೂ ಹೆಚ್ಚು ಮತಾಂತರ ಪ್ರಚೋದಿತ ಪುಸ್ತಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


























