ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ ಅಂತಾರಾಜ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಮಾರ್ಚ್ 3, 2026ರಂದು ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳನು ಮೂರು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ₹25,000 ಹಣವನ್ನು ಕಳವು ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡ ಬಜಪೆ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು.
ಪೊಲೀಸರ ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 31ರಂದು ಆರೋಪಿಯಾಗಿರುವ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25), ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತನು ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಕಳವಾಗಿದ್ದ ಹುಂಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳವು ಪ್ರಕರಣದಲ್ಲೂ ಆರೋಪಿಯಾಗಿರುವುದು ತಿಳಿದುಬಂದಿದೆ. ಅಲ್ಲದೆ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು–ಜೊಕಟ್ಟೆ ಪ್ರದೇಶದಲ್ಲಿ ನಡೆದ ಪ್ಯಾಷನ್ ಪ್ರೋ ಬೈಕ್ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿತನು ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳ್ಳತನ ನಡೆಸಿ ಮತ್ತೆ ತನ್ನ ರಾಜ್ಯಕ್ಕೆ ತೆರಳಿ ತಪ್ಪಿಸಿಕೊಳ್ಳುತ್ತಿದ್ದನು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಬಾಲಕೃಷ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ನೂತನ್, ರಾಜೇಶ್ ಮತ್ತು ಪ್ರಕಾಶ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


























