ಚಿತ್ರದುರ್ಗ:ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23), ತನ್ನ ಅಧ್ಯಾಪಕರ ಜೊತೆ ಸಂಬಂಧ ಕಲ್ಪಿಸಿ ನಡೆಸಲಾದ ಅಪಪ್ರಚಾರಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾರೆ.
ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್ನ ಮನೆಯಲ್ಲಿ ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಧ್ಯಾಪಕ ಡಾ. ರಾಜು ಅವರೊಂದಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ನೊಂದಿದ್ದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಲಿಖಿತಾ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ಪ್ರಾಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲವು ವಿದ್ಯಾರ್ಥಿನಿಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇವರ ಕಿರುಕುಳ ಮತ್ತು ಅಪಪ್ರಚಾರವೇ ನನ್ನ ಸಾವಿಗೆ ಕಾರಣ ಎಂದು ಅವರು ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಧ್ಯಾಪಕ ರಾಜು, ಪತ್ನಿ ನಿಶಾ ಮತ್ತು ಡೆತ್ ನೋಟ್ನಲ್ಲಿ ಹೆಸರಿಸಲಾದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



























