ವಿಟ್ಲ: ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಬಸ್ಸೊಂದು ಹಿಮ್ಮುಖವಾಗಿ ಚಲಿಸುವಾಗ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಬಸ್ಸಿನ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ವಿಟ್ಲ-ಮುಡಿಪು-ಸ್ಟೇಟ್ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ಬಸ್ ನಿಲ್ದಾಣದಲ್ಲಿ ನಿಲುಗಡೆಗಾಗಿ ಹಿಮ್ಮುಖವಾಗಿ ಬರುತ್ತಿತ್ತು.
ಈ ಸಮಯದಲ್ಲಿ ಬಸ್ ನಿಲ್ದಾಣದತ್ತ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಡಿಕ್ಕಿ ಹೊಡೆದಿದೆ. ಮಹಿಳೆ ಬಸ್ಸಿನ ಅಡಿಗೆ ಬೀಳುತ್ತಿರುವುದನ್ನು ನೋಡನೋಡುತ್ತಲೇ ಸ್ಥಳೀಯ ಜ್ಯೂಸ್ ಅಂಗಡಿಯವರು ಮತ್ತು ರಿಕ್ಷಾ ಚಾಲಕರು ಬೊಬ್ಬೆ ಹೊಡೆದಿದ್ದಾರೆ.
ತಕ್ಷಣ ಎಚ್ಚೆತ್ತ ಚಾಲಕ ಬಸ್ಸನ್ನು ನಿಲ್ಲಿಸಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.
ಗಾಯಗೊಂಡ ಮಹಿಳೆಯನ್ನು ಕೇಪು ಗ್ರಾಮದ ಕುದ್ದುಪದವು ಚೆಲ್ಯಡ್ಕ ನಿವಾಸಿ ಈಶ್ವರ ನಾಯ್ಕ ಎಂಬವರ ಪತ್ನಿ ಸುಶೀಲ (50 ವರ್ಷ) ಎಂದು ಗುರುತಿಸಲಾಗಿದೆ.
ಅನಾರೋಗ್ಯದ ಕಾರಣಕ್ಕಾಗಿ ವಿಟ್ಲದ ಸುರಕ್ಷಾ ಆಸ್ಪತ್ರೆಗೆ ತೆರಳಲು ಅವರು ಬಸ್ ನಿಲ್ದಾಣಕ್ಕೆ ಬಂದಿದ್ದರು.
ಗಾಯಾಳುವಿನ ಹಣೆಯ ಭಾಗಕ್ಕೆ ಮತ್ತು ಕೈಗೆ ತೀವ್ರತರದ ಗಾಯಗಳಾಗಿದ್ದು, ತಕ್ಷಣ ಅವರನ್ನು ವಿಟ್ಲ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಗೆ ಪೆಟ್ಟು ಬಿದ್ದಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದಾರೆ.



























