ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಹಾಗೂ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ವತಿಯಿಂದ ಪಾಂಗಳಾಯಿ ಅರಸು ಮುಂಡಿತ್ತಾಯ ವಠಾರದಲ್ಲಿ ಆಯೋಜಿಸಲಾದ “ಮಕ್ಕಳ ಕಲರವ” ಉಚಿತ ಸಂಸ್ಕಾರ ಬೇಸಿಗೆ ಶಿಬಿರಕ್ಕೆ ಮೊದಲ ದಿನ ಭಾನುವಾರ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಣೇಶ ಭಟ್ ಕೇರ ಖಂಡಿಗ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಬೀದಿ ಶ್ವಾನಗಳಿಗೆ ಸ್ವಂತ ಖರ್ಚಿನಲ್ಲಿ ಆಹಾರ ಒದಗಿಸುವುದರ ಜೊತೆಗೆ, ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸುತ್ತಿರುವುದಾಗಿ ತಿಳಿಸಿದರು. ಮಕ್ಕಳು ತಮ್ಮ ಪೋಷಕರೊಂದಿಗೆ ಹಸಿದ ಬೀದಿ ನಾಯಿಗಳು ಸೇರಿದಂತೆ ಅಶಕ್ತ ಪ್ರಾಣಿಗಳಿಗೆ ಆಹಾರ ಹಾಗೂ ನೀರು ನೀಡುವ ಮೂಲಕ ಪ್ರಾಣಿದಯೆ ತೋರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಧಾರ್ಮಿಕ ಶಿಕ್ಷಣ ತರಗತಿಗಳ ಆರಂಭದಿಂದ ಇಂದಿನವರೆಗೆ ನಡೆದ ಪ್ರಗತಿಯನ್ನು ವಿವರಿಸಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಾದ ಗರಿಮಾ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತ ಭಾಷಣ ಮಾಡಿ ಶಿಬಿರದ ಉದ್ದೇಶವನ್ನು ವಿವರಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿ, ಉದ್ಘಾಟಕರ ಪರಿಚಯ ಮಾಡಿಕೊಟ್ಟರು. ಪಾಂಗಳಾಯಿ ದೈವಸ್ಥಾನದ ಅಧ್ಯಕ್ಷ ಗೋಪಾಲ ನಾಯಕ್ ಶುಭಾಶಯ ಕೋರಿದರು.
ವೇದಿಕೆಯಲ್ಲಿ ಗಣೇಶ ಭಟ್ ಅವರ ಧರ್ಮಪತ್ನಿ ಪ್ರೀತಿ ಸುಧಾ ಉಪಸ್ಥಿತರಿದ್ದರು. ಪುಸ್ತಕ ಸಮಿತಿಯ ನಿರ್ವಾಹಕಿ ಶಂಕರಿ ಶರ್ಮ ವಂದಿಸಿದರು. ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ ಹಾಗೂ ದೈವಸ್ಥಾನದ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಶಿಬಿರದಲ್ಲಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಡಾ. ವಿಜಯ ಸರಸ್ವತಿ, ಪ್ರಭಾವತಿ, ಸುಧಾ ಹೆಬ್ಬಾರ್, ಶಂಕರಿ ಶರ್ಮ ಅವರು ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಮಾ ಸಂಪತ್, ರಶ್ಮಿ ಉಮಾನಾಥ್, ವಿನುತ, ಕ್ಷಮಾ ಸಂತೋಷ್ ಮುಂತಾದವರು ನಿರ್ವಹಣೆಯಲ್ಲಿ ಸಹಕರಿಸಿದರು.
ಮಾವಿನ ಎಲೆಗಳಿಂದ ವಿಶೇಷ ತೋರಣ ಅಲಂಕಾರ, ಮಕ್ಕಳಿಂದ ಸರಳ ಗಣಪತಿ ಪೂಜೆ, ದಿನನಿತ್ಯ ಪಠಿಸುವ ಶ್ಲೋಕಗಳು ಹಾಗೂ ವಿವಿಧ ಆಟೋಪಾಯಗಳೊಂದಿಗೆ ಶಿಬಿರದ ಮೊದಲ ದಿನ ಸಂಭ್ರಮದಿಂದ ಸಾಗಿತು. ಸುಮಾರು 185 ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ ಈ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದೆ.




























