ಪುತ್ತೂರು:ಮಂಗಳೂರು ಕೂಳೂರು ಸಮೀಪ ಹಿಂದಿನಿಂದ ಬಂದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಬೆಟ್ಟಂಪಾಡಿಯ ಕಲೆಂಜಿಲದ ಯುವಕನೋರ್ವ ಮೃತಪಟ್ಟಿರುವ ಘಟನೆ ಎ.9ರಂದು ಸಂಜೆ ವೇಳೆ ನಡೆದಿದೆ.
ಬೆಟ್ಟಂಪಾಡಿ ಗ್ರಾಮದ ಕಲೆಂಜಿಲ ಸೀತಾರಾಮ ಪೂಜಾರಿಯವರ ಪುತ್ರ ದೀಕ್ಷಿತ್ ಪೂಜಾರಿ(23ವ.) ಮೃತಪಟ್ಟವರು. ಮಂಗಳೂರಿನ ಜೆಎಸ್ಡಬ್ಲ್ಯೂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ದೀಕ್ಷಿತ್ ಅವರು ಮಂಗಳೂರಿನಲ್ಲಿಯೇ ಪಿಜಿಯಲ್ಲಿರುತ್ತಿದ್ದರು.
ಏ.9ರಂದು ಮಧ್ಯಾಹ್ನ ಊಟದ ವಿರಾಮದ ವೇಳೆ ತನ್ನ ಬಜಾಜ್ ಪಲ್ಸರ್ ಬೈಕ್ ನಲ್ಲಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆರಳುತ್ತಿದ್ದ ವೇಳೆ ಕೂಳೂರು ಸೇತುವೆಯಿಂದ ಮುಂದೆ ಸಾಗಿ ಬಸ್ ತಂಗುದಾಣದ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಂದ ಬಲ ಭಾಗದಲ್ಲಿದ್ದ ಕಾರನ್ನು ತಪ್ಪಿಸಲು ಎಡ ಭಾಗದಿಂದಾಗಿ ಬಸ್‌ನ್ನು ಚಲಾಯಿಸಿಕೊಂಡು ಬಂದು ದೀಕ್ಷಿತ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಿಂದ ಬೈಕ್ ಸಹಿತ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದ ದೀಕ್ಷಿತ್ ಅವರ ದೇಹದ ಮೇಲಿನಿಂದಲೇ ಬಸ್ ಹರಿದುಹೋಗಿ ತೀವ್ರ ಗಾಯಗೊಂಡಿದ್ದರು.ಅವರನ್ನು ಕೂಡಲೇ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಫಲಕಾರಿಯಾಗದೆ ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರ ಸಹೋದರ ರಕ್ಷಿತ್ ನೀಡಿದ ದೂರಿನಂತೆ ಖಾಸಗಿ ಬಸ್ ಚಾಲಕ ಮಹಮ್ಮದ್ ರಫೀಕ್ ವಿರುದ್ದ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೀಕ್ಷಿತ್ ಅವರು ತಂದೆ ಸೀತಾರಾಮ ಪೂಜಾರಿ, ತಾಯಿ ಜಲಜ, ಸಹೋದರರಾದ ರಕ್ಷಿತ್ ಹಾಗೂ ಅಕ್ಷಯ್ ಅವರನ್ನು ಅಗಲಿದ್ದಾರೆ.




























