ಪುತ್ತೂರು: ಹನುಮಗಿರಿಯನ್ನು ಕರ್ನಾಟಕದ ‘ದಕ್ಷಿಣ ಅಯೋಧ್ಯೆ’ ಎಂದೇ ಪರಿಗಣಿಸಲಾಗುತ್ತದೆ. ಇದು ಶ್ರೀರಾಮನ ಆದರ್ಶಗಳು ಮತ್ತು ಹನುಮಂತನ ಅಖಂಡ ಭಕ್ತಿಯ ಸಂಕೇತವಾಗಿದೆ. ಇಲ್ಲಿನ ಎತ್ತರದ ಗೋಪುರವು ಕೇವಲ ಕಟ್ಟಡವಲ್ಲ, ಬದಲಿಗೆ ಅದು ನಮ್ಮ ಸಂಸ್ಕೃತಿಯ ನಿರಂತರತೆ ಮತ್ತು ಶ್ರದ್ದೆಯ ಆಳವನ್ನು ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ನೈತಿಕ ಮೌಲ್ಯಗಳು, ಏಕತೆ ಮತ್ತು ಸದ್ಭಾವನೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಅನುಷ್ಠಾನಗಳನ್ನು ನಡೆಸಲಾಗಿದ್ದು, ಈ ಕಾರ್ಯಕ್ರಮವು ಸಮಾಜಕ್ಕೆ ಹಲವಾರು ಮಹತ್ವದ ಸಂದೇಶಗಳನ್ನು ನೀಡಿದೆ. ಹನುಮಂತನಂತೆ ಸೇವೆ, ಕರ್ತವ್ಯ ಮತ್ತು ಸಮರ್ಪಣಾ ಮನೋಭಾವವೇ ಜೀವನದ ನಿಜವಾದ ಮಾರ್ಗವಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರವರು ಹೇಳಿದರು.
ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಎ.10 ರಂದು ಶ್ರೀ ಕ್ಷೇತ್ರದಲ್ಲಿ ಭವ್ಯವಾದ ಮುಖ ಗೋಪುರ ಮತ್ತು ಮಂಟಪವನ್ನು ದೀಪ ಬೆಳಗಿಸುವಮೂಲಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ದೇವಾಲಯಗಳು ಕೇವಲ ಪೂಜಾಸ್ಥಳಗಳಲ್ಲ, ಅವು ಮುಂದಿನ ಪೀಳಿಗೆಗೆ ಸಂಸ್ಕಾರ ನೀಡುವ ನೀಡುವ ಮತ್ತು ಸಮಾಜಕ್ಕೆ ದಾರಿ ತೋರಿಸುವ ಕೇಂದ್ರಗಳಾಗಿವೆ ಎಂದ ರಾಜ್ಯಪಾಲರು, ಕಠಿಣ ಸಂದರ್ಭಗಳಲ್ಲೂ ಸತ್ಯ, ಧರ್ಮ ಮತ್ತು ಮರ್ಯಾದೆಯನ್ನು ಪಾಲಿಸುವುದು ಅತ್ಯಗತ್ಯ ಎಂಬ ಪ್ರೇರಣೆಯನ್ನು ಈ ಕ್ಷೇತ್ರ ನೀಡುತ್ತದೆ ಎಂದರು.ಹನುಮಗಿರಿಯಲ್ಲಿ ನಡೆದ ಈ ಭವ್ಯ ಆಯೋಜನೆಯು ಸನಾತನ ಧರ್ಮದ ಸಾಂಸ್ಕೃತಿಕ ಪರಂಪರೆಯ ಜೀವಂತ ಉತ್ಸವವಾಗಿ ಮೂಡಿಬಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸಂಸ್ಥಾನ ಗೋಕರ್ಣ ರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ನನಗೆ ಮನಸ್ಸಿಗೆ ಅತೀವ ಮುದ ನೀಡಿದ ಕ್ಷೇತ್ರ ಹನುಮಗಿರಿಯಾಗಿದ್ದು ದೇವ ಭಕ್ತಿ ಮತ್ತು ದೇಶ ಭಕ್ತಿ ಇಲ್ಲಿ ಅನಾವರಣಗೊಂಡಿದೆ. ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿಯೊಂದಿಗೆ ಭಾರತ ಮಾತೆಯ ಪರಿಪೂರ್ಣವಾದ ಮಂದಿರ ಇಲ್ಲಿದೆ. ಇದು ದೇಶ ಭಕ್ತಿಯ ಪ್ರತೀಕವಾಗಿದೆ ಎಂದು ಹೇಳಿದರು. ಹನುಮಗಿರಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಇಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ವಿಶೇಷವಾಗಿ ನಾರಿಕೇಳ ಸಮರ್ಪಣೆ ಒಂದು ವಿಶಿಷ್ಟ ಕಾರ್ಯವಾಗಿದೆ. ಅಯೋಧ್ಯೆ ಪುಣ್ಯಕ್ಷೇತ್ರದಿಂದ ಶ್ರೀರಾಮ ಜ್ಯೋತಿ ಹಾಗೇ ಅಂಜನಾದ್ರಿಯಿಂದ ಹನುಮ ಜ್ಯೋತಿಯನ್ನು ಗ್ರಾಮದ ಮನೆಮನೆಗೆ ಮುಟ್ಟಿಸುವ ಕೆಲಸ ನಡೆದಿರುವುದು ಶ್ಲಾಘನೀಯ ಈ ನಿಟ್ಟಿನಲ್ಲಿ ಶ್ರೀರಾಮ ಹನುಮರ ಆಶೀರ್ವಾದ ಸಮಸ್ತ ಜನತೆಯ ಮೇಲಿರಲಿ ಎಂದು ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಶುಭ ಹಾರೈಸಿದರು.
ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷನಳಿನ್ ಕುಮಾರ್ ಕಟೀಲ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತುಳುನಾಡು ಹತ್ತಾರು ಧರ್ಮ ಕ್ಷೇತ್ರಗಳಿರುವ ಧಾರ್ಮಿಕ ನಂಬಿಕೆಯ ತಳಹದಿಯಲ್ಲಿರುವ ನಾಡಾಗಿದೆ. ಹನುಮಗಿರಿ ಬ್ರಹ್ಮಕಲಶೋತ್ಸವವು ಬಹಳಷ್ಟು ವಿಶೇಷತೆಗಳಿಂದ ಕೂಡಿದ್ದು ದೈವಜ್ಞ, ತಂತ್ರಿವರ್ಯರ ಚಿಂತನೆ, ಮಾರ್ಗದರ್ಶನದೊಂದಿಗೆ 15 ವರ್ಷಗಳ ಬಳಿಕ ಪ್ರತಿಷ್ಠ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು. ಹನುಮಗಿರಿಯು ಧಾರ್ಮಿಕ ಪ್ರವಾಸೋದ್ಯಮ ಹೊಂದಿದ ಭಕ್ತಿಯ ತಾಣಾವಾಗಿದೆ. ವಿಶೇಷವಾಗಿ ಭಾರತ ಮಾತೆಯ ಮಂದಿರ ಇರುವ ಏಕೈಕ ಕ್ಷೇತ್ರ ಇದಾಗಿದೆ ಎಂದ ಅವರು, ಬ್ರಹ್ಮಕಲಶೋತ್ಸವದ ಅಂಗವಾಗಿ ಈಗಾಗಲೇ ಪಂಚಮುಖಿ ಆಂಜನೇಯ ಗುಡಿಯ ಎದುರು ಭಾಗದಲ್ಲಿ ವಿಶೇಷವಾಗಿ ಸಿಂಹ ಮಂಟಪ, ಮುಖ ಗೋಪುರ ನಿರ್ಮಾಣವಾಗಿದೆ ಅಲ್ಲದೆ ಆಕರ್ಷಕವಾದ ಉದ್ಯಾನವನ ನಿರ್ಮಿಸಲಾಗಿದೆ ಹಾಗೇ ಪಂಚಮುಖಿ ಆಂಜನೇಯ ಮತ್ತು ಕೋದಂಡರಾಮ ದೇವರ ಪಾಣಿಪೀಠಕ್ಕೆ ತಾಮ್ರದ ಹೊದಿಕೆ ಹಾಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ದ.ಕ ಸಂಸದ ಕ್ಯಾ। ಬ್ರಿಜೇಶ್ ಚೌಟ ಉಪಸ್ಥಿತರಿದ್ದರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ರಾಜ್ಯಪಾಲರಿಗೆ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ವಂದಿಸಿದರು. ಧರ್ಮ ಶ್ರೀ ಪ್ರತಿಷ್ಠಾನದ ಮಹಾಪೋಷಕರಾದ ಜಿ.ಕೆ ಮಹಾಬಲೇಶ್ವರ ಭಟ್, ಶ್ರೀ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಶ್ಯಾಮ್ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.




























