ಸುಳ್ಯ: ಐವರ್ನಾಡು ಗ್ರಾಮದ ಮಡ್ತಿಲದಲ್ಲಿ ನಡೆದ ಕುಟುಂಬದ ನೇಮೋತ್ಸವದ ಸಂದರ್ಭದಲ್ಲಿ ದೈವಧಾರಿಯ ಮೂಲಕ ಬೆದರಿಕೆ ಒಡ್ಡಿದ ಆರೋಪ ಸಂಬಂಧ ಇಬ್ಬರ ವಿರುದ್ಧ ಬೆಳ್ಳಾರೆ ಪೊಲೀಸರು ಎ. 7ರಂದು ಪ್ರಕರಣ ದಾಖಲಿಸಿದ್ದಾರೆ.
ಮಡ್ತಿಲ ನಿವಾಸಿ ಮಮತಾ ಭಾಸ್ಕರ ಮಡ್ತಿಲ ನೀಡಿದ ದೂರಿನ ಮೇರೆಗೆ, ದೈವಧಾರಿ ಮೋಹನ್ ಮತ್ತು ಸಚಿನ್ ಮಡ್ತಿಲ ವಿರುದ್ಧ ಕೇಸು ದಾಖಲಾಗಿದೆ. “ನಿನಗೆ ಮಗು ಬೇಕಾ ಅಥವಾ ಜಾಗ ಬೇಕಾ?” ಎಂದು ದೈವಧಾರಿಯ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಫೆಬ್ರವರಿ 24ರಂದು ನಡೆದಿದ್ದು, ಈ ಕುರಿತು ಮಮತಾ ಅವರು ಎಸ್.ಪಿ. ಹಾಗೂ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಆರೋಪಿಗಳನ್ನು ಕರೆಸಿ ಹೇಳಿಕೆ ಪಡೆದುಕೊಂಡಿದ್ದರು. ಆದರೆ ಪ್ರಕರಣ ದಾಖಲಿಸದೇ ಇದ್ದುದರಿಂದ, ನ್ಯಾಯಾಲಯದ ಮೆಟ್ಟಿಲೇರಿದ್ದ ಮಮತಾ ಅವರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಪ್ರಕರಣದ ಅಹವಾಲು ಆಲಿಸಿದ ಸುಳ್ಯ ನ್ಯಾಯಾಲಯವು ಮಾರ್ಚ್ 26ರಂದು ಪ್ರಕರಣ ದಾಖಲಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ಇದೀಗ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ, ಮಮತಾ ಅವರ ಗಂಡ ಭಾಸ್ಕರ ಮಡ್ತಿಲ ಮತ್ತು ಸಚಿನ್ ಮಡ್ತಿಲ ನಡುವೆ ಜಾಗದ ವಿವಾದ ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ, ಕೇಸನ್ನು ಹಿಂಪಡೆಯುವ ಉದ್ದೇಶದಿಂದ ದೈವಧಾರಿಯ ಮೂಲಕ ಬೆದರಿಕೆ ಹಾಕಿಸಲಾಗಿದೆ ಎಂದು ಆರೋಪಿಸಲಾಗಿದೆ.




























