ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ನೆಲ್ಯಾಡಿಯ ಸುದೀಪ್ ಶೆಟ್ಟಿ ಆತ್ಮಹತ್ಯೆ ಸಂಬಂಧ ಆತನ ಪತ್ನಿ ಸೌಮ್ಯ ಶೆಟ್ಟಿಯನ್ನು ಎ. 11ರಂದು ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಸುದೀಪ್ ಶೆಟ್ಟಿ ಮತ್ತು ಕಾರ್ಕಳದ ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಕಳೆದ ಫೆಬ್ರವರಿ 17ರಂದು ಪುತ್ತೂರಿನಲ್ಲಿ ನೋಂದಾಯಿತ ವಿವಾಹವಾಗಿದ್ದರು. ಅನಂತರ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ತಿಂಗಳೊಳಗೆ ಅಂದರೆ ಮಾ. 22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಾ. 29ರಂದು ಸುದೀಪ್ ಸಾವನ್ನಪ್ಪಿದ್ದರು. ಈ ಘಟನೆ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ತಂದೆಯಿಂದ ದೂರು:
ನಂತರದ ಬೆಳವಣಿಗೆಯಲ್ಲಿ ಸುದೀಪ್ ಶೆಟ್ಟಿ ಅವರ ತಂದೆ ದಾಮೋದರ್ ಅವರು ತಮ್ಮ ಸೊಸೆ ಸೌಮ್ಯ ಶೆಟ್ಟಿ ವಿರುದ್ಧವೇ ಗಂಭೀರ ಆರೋಪಗಳನ್ನು ಹೊರಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೌಮ್ಯ ತನ್ನ ಮಗನಿಗೆ ವಿಷ ಹಾಕಿ ಕೊಂದಿದ್ದಾಳೆ ಮತ್ತು ಆತ ವಿಷ ಸೇವಿಸಿದ ವಿಷಯವನ್ನು ಏಳು ದಿನಗಳ ಕಾಲ ಮುಚ್ಚಿಟ್ಟು ಸರಿಯಾದ ಚಿಕಿತ್ಸೆ ಸಿಗದಂತೆ ಮಾಡಿದ್ದಾಳೆ ಎಂದು ದೂರಿನಲ್ಲಿ ದಾಮೋದರ್ ಉಲ್ಲೇಖಿಸಿದ್ದರು. ಅಲ್ಲದೆ, ಸೌಮ್ಯ ಈ ಹಿಂದೆಯೂ ಹಲವರಿಗೆ ವಂಚಿಸಿರುವ ಕುರಿತು ಪೊಲೀಸರಿಗೆ ತಿಳಿಸಿದ್ದರು. ಸೌಮ್ಯ ಮಾನಸಿಕ ಕಿರುಕುಳ ನೀಡಿ ಸುದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ದೂರಿನಲ್ಲಿ ದಾಖಲಾಗಿತ್ತು.
ತನಿಖೆ ಚುರುಕು:
ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು. ವಾರದ ಹಿಂದಷ್ಟೇ ನಡೆದ ಈ ಘಟನೆಯ ತನಿಖೆ ಮುಂದುವರಿದಿದ್ದು, ಇದೀಗ ಪೊಲೀಸರು ಸೌಮ್ಯ ಶೆಟ್ಟಿ ಅವರನ್ನು ಉಡುಪಿಯಲ್ಲಿ ಬಂಧಿಸಿದ್ದಾರೆ. ಸುದೀಪ್ ಶೆಟ್ಟಿ ಅವರ ಸಾವಿಗೆ ನಿಖರ ಕಾರಣವೇನು? ಸೌಮ್ಯ ಅವರ ಪಾತ್ರವೇನಿದೆ ? ವಿಷ ಸೇವನೆಯ ಹಿಂದಿನ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ಪೊಲೀಸರು ಸೌಮ್ಯ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಬಂಧನದೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದಂತಾಗಿದೆ.




























