ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತದಲ್ಲಿ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ. ಹೈದರಾಬಾದ್-ವಿಜಯವಾಡ ಹೆದ್ದಾರಿಯ ಕಾಂಚಿಕಾಚರ್ಲಾ ಮಂಡಲದ ಕೀಸರ ಟೋಲ್ ಬೂತ್ ಬಳಿ ಕಾಂಕ್ರೀಟ್ ಸಾಗಿಸುತ್ತಿದ್ದ ಟ್ರಕ್ ಬಿಎಂಡಬ್ಲ್ಯೂ ಕಾರಿನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಐಷಾರಾಮಿ ಕಾರು ಅಪ್ಪಚ್ಚಿಯಾಗಿದ್ದು, ಅಪಘಾತದಲ್ಲಿ ಹಿರಿಯ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ.
ಹೈಕೋರ್ಟ್‌ನ ಹಿರಿಯ ವಕೀಲ ಬಿ. ಶ್ರೀನಿವಾಸ್ ರಾವ್ ಮೃತ ದುರ್ದೈವಿ. ಶ್ರೀನಿವಾಸ್ ಅಮರಾವತಿಯಲ್ಲಿ ನಡೆದ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು.
TS 09 FT 6662 ಸಂಖ್ಯೆಯ ಬಿಎಂಡಬ್ಲ್ಯೂ ಕಾರಿನಲ್ಲಿ (BMW Car) ಶ್ರೀನಿವಾಸ್ ಹೈದರಾಬಾದ್‌ಗೆ ತೆರಳುತ್ತಿದ್ದರು. ಇಂದು (ಶನಿವಾರ) ಸಂಜೆ 4:15 ರಿಂದ 4:20ರ ಸುಮಾರಿಗೆ, ಕೀಸರ ಟೋಲ್ ಪ್ಲಾಜಾ ಬಳಿ ಪ್ರಯಾಣಿಸುತ್ತಿದ್ದಾಗ ಕಾಂಕ್ರೀಟ್ ಮಿಕ್ಸರ್ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ಕಾರಿನ ಮೇಲೆ ಬಿದ್ದಿತು. ಇದರಿಂದ ಕಾರು ಅಪ್ಪಚ್ಚಿಯಾಗಿ, ವಕೀಲ ಶ್ರೀನಿವಾಸ್ ರಾವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಜೆಸಿಬಿಗಳ ಸಹಾಯದಿಂದ ಟ್ಯಾಂಕರ್ ತೆರವುಗೊಳಿಸಲಾಯಿತು. ನಂತರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ವಿಜಯವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನ ಪತ್ತೆ ಹಚ್ಚುತ್ತಿದ್ದಾರೆ. ಟ್ಯಾಂಕರ್ ಓವರ್ ಲೋಡ್ ಆಗಿದಯೇ? ಅಥವಾ ಚಾಲಕನ ನಿರ್ಲಕ್ಷ್ಯವಿದೆಯೇ ಅನ್ನೋದನ್ನ ತಿಳಿಯಲು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎಸ್‌ವಿ ರಾಜ ಶೇಖರ ಬಾಬು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ರೆಡಿ-ಮಿಕ್ಸ್ ಕಾಂಕ್ರೀಟ್ ಸಾಗಿಸುತ್ತಿದ್ದ ಟ್ಯಾಂಕರ್ ಬ್ರೇಕ್ ವೈಫಲ್ಯದಿಂದಾಗಿ ನಿಯಂತ್ರಣ ಕಳೆದುಕೊಂಡಿತು. ಅಪಘಾತದ ಸಮಯದಲ್ಲಿ BMW ಕಾರು ಟೋಲ್ ಗೇಟ್ ದಾಟುತ್ತಿತ್ತು. ವಾಹನದ ಭಾರೀ ತೂಕ ಮತ್ತು ಅದರ ಹೊರೆಯಿಂದಾಗಿ ಕಾರು ಅಪ್ಪಚ್ಚಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿದ್ದ ಪೊಲೀಸರು ಮತ್ತು ಟೋಲ್ ಪ್ಲಾಜಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು. ಆದಾಗ್ಯೂ ಯಾವುದೇ ಪ್ರಯೋಜನವಾಗಲಿಲ್ಲ.




























