ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್‌ಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಮೀಸಲಿರಿಸಿ ಸರ್ಕಾರ ನೂತನ ಕರಡು ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ.
ರಾಜ್ಯದಲ್ಲಿ ಹೊಸದಾಗಿ ಒಟ್ಟು 56 ತಾಲ್ಲೂಕುಗಳು ರಚಣೆಯಾಗಿರುವುದರಿಂದ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದ್ದ ಪ್ರತಿ 10,000 ಜನ ಸಂಖ್ಯೆಗೆ ಬದಲಾಗಿ ಪ್ರತಿ 12,500 ರಿಂದ 15,000 ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿಪಡಿಸಿದೆ.
ಈ ಹಿಂದೆ ಇದ್ದಂತಹ ಒಟ್ಟು 3,903 ತಾಲ್ಲೂಕು ಪಂಚಾಯತ್ ಕ್ಷೇತ್ರಗಳು ಮಾತ್ರ ಇರುವ ಕಾರಣ ಹಾಗೂ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶವಾಗಿ ಪರಿವರ್ತಿತವಾಗಿದ್ದು, ಬೌಗೋಳಿಕವಾಗಿ ಕ್ಷೇತ್ರದ ವ್ಯಾಪ್ತಿ ಬದಲಾವಣೆ ಆಗಿರುವುದರಿಂದ ರಾಜ್ಯದ ಎಲ್ಲಾ ತಾಲೂಕು ಪಂಚಾಯತ್ ಗಳ ಮೀಸಲಾತಿಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ ನಿಯಮಗಳು 2021ರ ನಿಯಮ 5(ಬಿ) ರಂತೆ ಹೊಸ ಮತಕ್ಷೇತ್ರಗಳೆಂದು ಪರಿಗಣಿಸಿ ಮೀಸಲಾತಿಯನ್ನು ಹೊಸದಾಗಿ ಪ್ರಾರಂಭಿಸಿ ನಿಗದಿಪಡಿಸಲು ತೀರ್ಮಾನಿಸಿದೆ.
ಮಂಗಳೂರು ತಾಲೂಕಿನ 12 ಕ್ಷೇತ್ರಗಳು, ಮೂಲ್ಕಿ ತಾಲೂಕಿನ 11 ಕ್ಷೇತ್ರಗಳು, ಉಳ್ಳಾಲ ತಾಲೂಕು ಪಂಚಾಯತ್‌ನ 10 ಕ್ಷೇತ್ರಗಳು, ಬಂಟ್ವಾಳದ 24 ಕ್ಷೇತ್ರಗಳು, ಮೂಡಬಿದಿರೆಯ 11 ಕ್ಷೇತ್ರಗಳು,
ಪುತ್ತೂರಿನ 11 ಕ್ಷೇತ್ರಗಳು, ಸುಳ್ಯ ತಾಲೂಕಿನ 9 ಕ್ಷೇತ್ರಗಳು, ಬೆಳ್ತಂಗಡಿ ತಾಲೂಕಿನ 21 ಕ್ಷೇತ್ರಗಳು ಹಾಗೂ ಕಡಬ ತಾಲೂಕಿನ 9 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.
2021ರ ನಿಯಮ 6 ರನ್ವಯ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 01-07-2021 ರಿಂದ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ದಿನಾಂಕ: 08-07-2021 ರೊಳಗೆ ಚುನಾವಣಾ ಆಯೋಗಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು.