ಪುತ್ತೂರು: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮ ಸ್ಥಳ ಪಡುಮಲೆಯಲ್ಲಿ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ವತಿಯಿಂದ ಜೀರ್ಣೋದ್ಧಾರ ಗೊಂಡಿರುವ ಕೋಟಿ-ಚೆನ್ನಯರ ಆರಾಧ್ಯ ದೇವರಾದ ನಾಗಬೆರ್ಮರಗುಡಿ, ತೀರ್ಥಬಾವಿ, ನಾಗಸನ್ನಿಧಿ, ರಕ್ತೇಶ್ವರಿ ಹಾಗೂ ದೇಯಿ ಬೈದೆತಿ ಸಮಾಧಿ ಸ್ಥಳಗಳ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆಯು ದ.6ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾ ಭವನದಲ್ಲಿ ನಡೆಯಿತು.
ಟ್ರಸ್ಟ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ಚಾಳ್ ಮಾತನಾಡಿ,5 ಶತಮಾನಗಳ ಇತಿಹಾಸವಿರುವ ಕೋಟಿ-ಚೆನ್ನಯರ ಜನ್ಮ ಸ್ಥಾನ, ಮೂಲಸ್ಥಾನದ ಕುರಿತು ಗೊಂದಲ, ಜಿಜ್ಞಾಸೆಗಳನ್ನು ದೂರಮಾಡಿ ಸತ್ಯ ವಿಚಾರಗಳನ್ನು ಸಮಾಜಕ್ಕೆನೀಡುವುದು ಟ್ರಸ್ಟ್ನ ಧ್ಯೇಯ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಿಗೆ ಹೆಸರಿಡುವಂತೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಮೂಲಸ್ಥಾನ ಕತ್ತಲೆಯಲ್ಲಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರ ಸಲಹೆಯಂತೆ ಮೂಲಸ್ಥಾನ ದ ಅಭಿವೃದ್ಧಿ ಕಾರ್ಯಗಳು ನಡೆಸಿದೆ. ಇದರ ಬ್ರಹ್ಮಕಲಶವು ಏಪ್ರಿಲ್ನಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಕಚೇರಿಯು ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಗೌರವಾಧ್ಯಕ್ಷ ರುಕ್ಮಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಡಳಿತ ಮೊಕ್ತೇಸರ ಚಲನಚಿತ್ರ ನಟ ವಿನೋದ್ ಆಳ್ವ, ಟ್ರಸ್ಟ್ ನ ಉಪಾಧ್ಯಕ್ಷ ಯೋಗೀಶ್, , ಮೊಕ್ತೇಸರ ರತನ್ ಕುಮಾರ್ ನಾಯಕ್, ಕೊಟ್ಟಿಬೆಟ್ಟು ಏಳ್ನಾಡು ಟ್ರಸ್ಟ್ನ ರಾಧಾಕೃಷ್ಣ ನಾಯಿಕ್, ಆರಿಗ ಪೆರ್ಮುಂಡ ಗರಡಿಯ ಮೊಕ್ತೇಸರ ಡಾ.ಅಶೋಕ್ ಪಡಿವಾಳ್, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪಾಪೆಮಜಲು ಗರಡಿಯ ಮುಕುಂದ ಶಾಂತಿವನ, ನ್ಯಾಯವಾದಿ ಚಿದಾನಂದ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಶವ ಪೂಜಾರಿ ಬೆದ್ರಾಳ, ಮೋನಪ್ಪ ಕರ್ಕೇರಾ, ಗುರುಪ್ರಸಾದ್ ರೈ ಕುದ್ಕಾಡಿ, ವೇದನಾಥ ಸುವರ್ಣ, ಶ್ರೀನಿವಾಸ ಪೆರ್ವೋಡಿ, ಕೋಡಿಂಬಾಡಿ ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಪೂಜಾರಿ, ಕಲಾವಿದ ಕೃಷ್ಣಪ್ಪ, ಕಬಕ ಗ್ರಾ.ಪಂ ಮಾಜಿ ಸದಸ್ಯ ಬಾಲಕೃಷ್ಣ ಪೂಜಾರಿ ಪಲ್ಲತ್ತಾರು ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ವಿಜಯ ಕುಮಾರ್ ಸೊರಕೆ ಸ್ವಾಗತಿಸಿದರು. ಶೇಖರ್ ನಾರಾವಿ ಕಾರ್ಯಕ್ರಮ ನಿರೂಪಿಸಿದರು.