ಚಾರ್ಮಾಡಿ: ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಧರ್ಮಸ್ಥಳ ಠಾಣೆ ಪೊಲೀಸರು ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ತಡೆದು ನಿಲ್ಲಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಜು.10ರಂದು ನಡೆದಿದೆ. ಟಿ.ಶಿವಣ್ಣ ಮತ್ತು ಕೆ.ಪಿ ಸೋಮೇಗೌಡ ಎಂಬವರು ಪೊಲೀಸರ ವಶ ಇರುವ ಆರೋಪಿಗಳಾಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ ಕೆ ರವರು ಸಿಬ್ಬಂದಿಗಳೊಂದಿಗೆ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಕಾರ್ಯನಿರ್ವಹಿಸುತ್ತಿರುವ ವೇಳೆ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಕೆ.ಎ. 18 ಸಿ 0770 ನೇ ನೊಂದಣಿ ಸಂಖ್ಯೆಯ ಮಹೀಂದ್ರಾ ಜಿತೋ ವಾಹನವನ್ನು ತಡೆದು ನಿಲ್ಲಿಸಿದ್ದು, ವಾಹನವನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ವಾಹನದ ಹಿಂಬದಿಯಲ್ಲಿ 2 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ದಾಖಲೆ ಹಾಜರುಪಡಿಸದೆ ಇರುವುದರಿಂದ ಇವರನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಜಾನುವಾರುಗಳನ್ನು ಕೊಂದು ಮಾಂಸ ಮಾಡಿ ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.