ಸುಳ್ಯ: ಜಯನಗರದ ಕೊರಂಬಡ್ಕ ಶ್ರೀ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಹಲವು ವರ್ಷಗಳಿಂದ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಹಾಗೂ ಆ ಜಾಗದಲ್ಲಿ ಆಡಳಿತ ಸಮಿತಿಯವರು ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡಿದುದರಿಂದ ಯುವಕರಿಗೆ ಆಡಲು ಅಸಾಧ್ಯವಾದ ಮತ್ತು ದೈವಸ್ಥಾನ ಸಮಿತಿಯವರೇ ಪೋಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.
ದೈವಸ್ಥಾನದ ಈ ಸ್ಥಳದಲ್ಲಿ ಯುವಕರು ಕ್ರಿಕೆಟ್ ಆಡುವ ವಿಚಾರದಲ್ಲಿ ಇದಕ್ಕೂ ಮೊದಲು ಪರವಿರೋಧ ಚರ್ಚೆಗಳು ನಡೆಯುತ್ತಿದ್ದವು. ಆಟವಾಡುವ ಯುವಕರಲ್ಲಿ ಹಲವು ಮಂದಿ ದೈವಸ್ಥಾನ ಸಮಿತಿಯಲ್ಲೂ ಇರುವವರು. ತಾವು ಕ್ರಿಕೆಟ್ ಆಡುವ ಜಾಗದಲ್ಲಿ ಏಕಾಏಕಿ ಆಡಳಿತ ಮಂಡಳಿಯವರು ಗಿಡ ನೆಡುವುದಕ್ಕಾಗಿ ಗುಂಡಿ ತೋಡಿದರೆಂದು ಬೇಸರಗೊಂಡ ಯುವಕರು ಗುಂಡಿಯನ್ನು ತೋಡಿದ ದಿನ ಕಾಂಪೌಂಡಿನ ಹೊರಭಾಗದ ರಸ್ತೆಯಲ್ಲಿ ಜಮಾಯಿಸಿದ್ದರು. ಇದನ್ನು ಕಂಡ ಒಬ್ಬರು ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದು ಸುಳ್ಯ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ತಿಳಿಸಿದರೆನ್ನಲಾಗಿದೆ.
ದೈವಸಾನಿಧ್ಯದಲ್ಲಿ ಸುಮಾರು ಎರಡು ವರ್ಷದಿಂದ ಸ್ಥಳೀಯ ಯುವಕರು ಆಟವಾಡುತ್ತಿದ್ದರು. ಈ ಮೈದಾನದಲ್ಲಿ ಬೇರೆ ಬೇರೆ ಜಾತಿ, ಧರ್ಮದ ಹುಡುಗರು, ಮಕ್ಕಳು ನಿರಂತರವಾಗಿ ಬಿಡುವಿನ ವೇಳೆಯಲ್ಲಿ ಆಟವಾಡುತ್ತಿದ್ದರು. ಆದರೆ ಕಳೆದ ವರ್ಷದವರೆಗೆ ಈ ಸನ್ನಿಧಿಗೆ ಆಡಳಿತ ಮಂಡಳಿ ಇರಲಿಲ್ಲ. ಕಳೆದ ವರ್ಷ ಈ ದೇವಸ್ಥಾನಕ್ಕೆ ಆಡಳಿತ ಸಮಿತಿ ರಚಿಸಲಾಗಿತ್ತು. ಅದುವರೆಗೂ ಈ ಯುವಕರು ಆಟವಾಡುವುದನ್ನು ಯಾರು ಕೂಡ ಪ್ರಶ್ನೆ ಮಾಡಿರಲಿಲ್ಲ. ಇದೀಗ ಕೆಲದಿನಗಳ ಹಿಂದೆ ಪದಾಧಿಕಾರಿಯಾಗಿ ನೇಮಕಗೊಂಡ ಪ್ರವೀಣ್ ಕುಮಾರ್ ಜಯನಗರ ರವರು ಯುವಕರು ಆಟವಾಡುತ್ತಿದ್ದ ಮೈದಾನದಲ್ಲಿ ಬೇಕೆಂದೇ ಗುಂಡಿಗಳನ್ನು ತೆಗೆದಿದ್ದರು ಎನ್ನಲಾಗಿದೆ.
ಇದರಿಂದಾಗಿ ಆಡಲು ಕಷ್ಟವಾದ ಕಾರಣ ಪ್ರವೀಣ್‌ರ ಬಳಿ ಹೋಗಿ ಕೇಳಿದ್ದ್ದು, ಆದರೆ ಪ್ರವೀಣ್ ಇದಕ್ಕೆ ಸರಿಯಾಗಿ ಉತ್ತರ ಕೊಡದೆ ಇಲ್ಲಿ ಹಿಂದೂಗಳು ಅಲ್ಲದೆ ಬೇರೆ ಯಾವ ಧರ್ಮದವರು ಆಟವಾಡಬಾರದು ಎಂದು ಗದರಿಸಿದ್ದಾರೆ ಎನ್ನಲಾಗಿದೆ. ಕಳೆದ ಶನಿವಾರ ಹುಡುಗರ ತಂಡ ಇಲ್ಲಿ ಆಟವಾಡಲು ತೆರಳಿದಾಗ ಈ ಜಾಗ ಹಿಂದೂಗಳಿಗೆ ಸೇರಿದ್ದು. ಇಲ್ಲಿ ಹಿಂದೂ ಬಿಟ್ಟು ಅನ್ಯಧರ್ಮೀಯರು ಆಡಬಾರದು. ಅವರು ಆಡಲು ಚರ್ಚ್, ಮಸೀದಿ ಜಾಗಗಳಿವೆ. ಅಲ್ಲೇ ಆಟವಾಡಲಿ ಎಂದು ದಬಾಯಿಸಿದ್ದಾರೆ. ಈ ಮೂಲಕ ಸಾಮರಸ್ಯದಿಂದ ಆಟವಾಡುತ್ತಿದ್ದ ಯುವಕರ ನಡುವೆ ಜಾತಿ,ಧರ್ಮದ ವಿಷಬೀಜ ಬಿತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ವೈರಲ್ ಆಗುತ್ತಿದೆ.