ಪುತ್ತೂರು: ಇತ್ತೀಚೆಗೆ ಪಡುಮಲೆಯಲ್ಲಿ ನಡೆದ ಸಭೆಯಲ್ಲಿ ಹರಿಕೃಷ್ಣ ಬಂಟ್ವಾಳ್ ಅವರು ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಕುರಿತಂತೆ ಅವಹೇಳನಾಕಾರಿ ಹೇಳಿಕೆ ನೀಡಿದ್ದು, ಕಾರಣಿಕ ಪುಇರುಷರ ಮೂಲಸ್ಥಾನದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ , ಇದು ಖಂಡನೀಯ ಎಂದು ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಲ್ ಕ್ಷೇತ್ರಾಡಳಿತ ಸಮಿತಿ ತಿಳಿಸಿದೆ. ಕ್ಷೇತ್ರಾಡಳಿತ ಸಮಿತಿಯ ಕಾರ್ಯಕಾರಿ ಸಭೆ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದ್ದು, ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪೀತಾಂಬರ ಹೇರಾಜೆ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಹರಿಕೃಷ್ಣ ಬಂಟ್ವಾಳ್ ಅವರು ಹಲವಾರು ಕಡೆಗಳಲ್ಲಿ ಸಭೆಗಳನ್ನು ನಡೆಸುತ್ತಾ, ಕೋಟಿ ಚೆನ್ನಯರ ಬಗ್ಗೆ ಹಾಗೂ ಮಾತೆ ದೇಯಿಬೈದ್ಯೆತಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯದ ಆತ್ಮಶಕ್ತಿಗಳಾದ ಕೋಟಿ ಚೆನ್ನಯರ ಬಗ್ಗೆ ಸಮಾಜದಲ್ಲಿ ಹಾಗೂ ಸರ್ವ ಜನಾಂಗದ ಭಕ್ತವೃಂದದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೂ ಕೋಟಿ ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆಯನ್ನೂ ಲೇವಡಿ ಮಾಡುವ ಹರಿಕೃಷ್ಣ ಬಂಟ್ವಾಳ್, ಕೋಟಿ ಚೆನ್ನಯರ ಮೂಲಸ್ಥಾನ ಕತ್ತಲೆಯಲ್ಲಿದೆ ಎಂಬ ಆಘಾತಕಾರಿ ಹೇಳಿಕೆಯನ್ನೂ ನೀಡಿರುತ್ತಾರೆ. ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ಸತ್ಯ ಧರ್ಮ ಚಾವಡಿ, ಮೂಲಸ್ಥಾನ ಗರಡಿ, ಸಾಯನ ಬೈದ್ಯರ ಗುರುಪೀಠ, ದೇ#ಯಿ ಬೈದ್ಯೆತಿ ಸಮಾಧಿ, ಆದಿದೈವ ಧೂಮಾವತಿ ಮತ್ತು ಸಪರಿವಾರ ದೈವಸ್ಥಾನ ಸೇರಿದಂತೆ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆದು, ಬ್ರಹ್ಮಕಲಶೋತ್ಸವವೂ ಅದ್ಧೂರಿಯಾಗಿ ನಡೆದಿದೆ. ಅಂತಹುದರಲ್ಲಿ ನಾಡಿನ ಪುಣ್ಯಕ್ಷೇತ್ರ ಬೆಳಗುತ್ತಿರುವಾಗ ಅಸಂಬದ್ಧ ಹೇಳಿಕೆ ಸಮಂಜಸವಲ್ಲ ಎನ್ನಲಾಗಿದೆ. ಇದರ ಜತೆಗೆ ಸಮಾಜವನ್ನು ಒಡೆಯುವು, ಭಕ್ತರನ್ನು ಗೊಂದಲಕ್ಕೆ ದೂಡುವ ಹೇಳಿಕೆಗಳನ್ನು ಮುಂದುವರೆಸಿದ್ದಲ್ಲಿ ಗೆಜ್ಜೆಗಿರಿಯ ಭಕ್ತರು ಉಗ್ರ ಹೋರಾಟವನ್ನೂ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷರಾದ ಪೀತಾಂಬರ ಹೇರಾಜೆ, ಡಾ.ರಾಜಶೇಖರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ,ಉಲ್ಲಾಸ್ ಕೋಟ್ಯಾನ್,ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಅನುವಂಶಿಕ ಮೊಕ್ತೇಸರರಾದ ಮಾತೃಶ್ರೀ ಲೀಲಾವತಿ ಪೂಜಾರಿ, ರವೀಂದ್ರ ಸುವರ್ಣ, ಮಹಾಬಲ ಪೂಜಾರಿ, ಸಮಿತಿ ಸದಸ್ಯರಾದ ಎನ್ ಟಿ ಪೂಜಾರಿ ಮುಂಬೈ, ಭಾಸ್ಕರ ಸಾಲಿಯಾನ್ ಮುಂಬೈ, ಡಿ ಆರ್ ರಾಜು ಕಾರ್ಕಳ, ಚಂದ್ರಶೇಖರ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ಉದಯ ಕುಮಾರ್ ಕೊಲಾಡಿ, ದಯಾನಂದ ಕರ್ಕೇರ, ಕೆಡೆಂಜಿಗುತ್ತು ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.