ಗೃಹರಕ್ಷಕದಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರಿಗೆ ೨೦೧೯ ಇಸವಿಯ ಪ್ರತಿಷ್ಠಿತ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಜು. ೧೩ ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಧಾನ ಮಾಡಿ ಗೌರವಿಸಿದರು.
ಡಾ|| ಮುರಲೀ ಮೋಹನ್ ಚೂಂರಾರು ಇವರು ವೃತ್ತಿಯಲ್ಲಿ ದಂತ ವೈದ್ಯರು ಮತ್ತು ಬಾಯಿ, ಮುಖ ಹಾಗೂ ದವಡೆ ಶಸ್ತ್ರಚಿಕಿತ್ಸಕರು. ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಸಂದರ್ಶಕ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಮಂಜೇಶ್ವರದ ಹೊಸಂಗಡಿಯಲ್ಲಿ ಸುಮಾರು ೨೫ ವರ್ಷಗಳಿಂದ ತಮ್ಮ ದಂತ ಚಿಕಿತ್ಸಾಲಯವನ್ನು ನಡೆಸುತ್ತಿದ್ದಾರೆ. ೨೦೧೫ನೇ ಜನವರಿ ೬ ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿದ ಕೂಡಲೇ ನಿಷ್ಕ್ರಿಯಗೊಂಡಿದ್ದ ಎಲ್ಲಾ ಘಟಕಗಳನ್ನು ಪುನಶ್ವೇತನಗೊಳಿಸಿ ಗೃಹರಕ್ಷಕ ಇಲಾಖೆಗೆ ನೇಮಕಾತಿ ರ್‍ಯಾಲಿಗಳನ್ನು ಆಯೋಜಿಸಿ, ಖಾಲಿ ಇದ್ದ ಗೃಹರಕ್ಷಕರ ಸ್ಥಾನಗಳನ್ನು ಭರ್ತಿಮಾಡಿದರು.
೨೦೧೫ರಲ್ಲಿ ಕೇವಲ ೩೦೦ ರಷ್ಟಿದ್ದ ಗೃಹರಕ್ಷಕರ ಸಂಖ್ಯೆ ೨೦೧೭ರಲ್ಲಿ ೧೦೦೦ಕ್ಕೆ ಬಂದು ನಿಂತಿತು. ದಕ್ಷಿಣ ಕನ್ನಡ ಜಲ್ಲೆಯ ಎಲ್ಲಾ ೧೫ ಘಟಕಕ್ಕೂ ಹಲವಾರು ಬಾರಿ ಭೇಟಿ ನೀಡಿ, ಗೃಹರಕ್ಷಕರಿಗೆ ಸ್ಪೂರ್ತಿ ತುಂಬಿಸಿ, ಹುರಿದುಂಬಿಸಿ ಎಲ್ಲಾ ಘಟಕಗಳನ್ನು ಕ್ರಿಯಾಶೀಲ ಘಟಕಗಳನ್ನಾಗಿ ಪರಿವರ್ತಿಸಿದರು.
ಗೃಹರಕ್ಷಕರ ಹಿತ ಕಾಯುವ ಉದ್ದೇಶದಿಂದ ವೈದ್ಯಕೀಯ ಶಿಬಿರ, ಹೃದಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ, ಮಧುಮೇಹ ತಪಾಸಣಾ ಶಿಬಿರ ಆಯೋಜಿಸಿದರು, ಜೊತೆಗೆ ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲಾ ಘಟಕಗಳಲ್ಲಿ ಸ್ವಚ್ಚತಾ ಆಂದೋಲನವನ್ನು ಆರಂಭಿಸಿ ಯಶಸ್ವಿಯಾಗಿ ನಿರ್ವಹಿಸಿದರು. ?ಒಬ್ಬ ಗೃಹರಕ್ಷಕರಿಗೆ ಒಂದು ಗಿq? ಎಂಬ ಹೊಸ ಪರಿಕಲ್ಪನೆಯೊಂದಿಗೆ ಎಲ್ಲಾ ಘಟಕಗಳಲ್ಲಿ ವನಮಹೋತ್ಸವ ಆಚರಣೆಯನ್ನು ೨೦೧೬ರಲ್ಲಿ ಆರಂಭಿಸಿ ಕಳೆದ ೫ ವರ್ಷಗಳಿಂದ ನಿರಂತರವಾಗಿ ಗಿಡ ನೆಟ್ಟು ಬೆಳೆಸಿ, ಗೃಹರಕ್ಷಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಈವರೆಗೆ ಸುಮಾರು ೧೦೦೦ ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಿರುತ್ತಾರೆ. ಹೊಸದಾಗಿ ಸೇರ್ಪಡೆಗೊಂಡ ಗೃಹರಕ್ಷಕರಿಗಾಗಿ ೪ ಬಾರಿ ಮೂಲ ತರಬೇತಿ ಶಿಬಿರ ಆಯೋಜಿಸಿ ಗೃಹರಕ್ಷಕರ ಪಡೆಗೆ ಹೊಸ ಆಯಾಮ ನೀಡಿ ನವ ಚೈತನ್ಯ ತುಂಬಿದರು. ಇದಲ್ಲದೆ ನೆರೆ ಪರಿಹಾರ, ಶಾಂತಿ ಸುವ್ಯವಸ್ಥೆ ಪಾಲನೆ, ಬಂದೋಬಸ್ತ್ ಕರ್ತವ್ಯ, ಚುನಾವಣಾ ಕರ್ತವ್ಯ ಹೀಗೆ ಎಲ್ಲಾ ಕರ್ತವ್ಯದಲ್ಲಿ ಪೊಲೀಸರೊಂದಿಗೆ ಮತ್ತು ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿ, ಗೃಹರಕ್ಷಕರಿಗೆ ಹೆಚ್ಚು ಆತ್ಮವಿಶ್ವಾಸ ತುಂಬಿ, ಹೆಚ್ಚು ಕ್ರಿಯಶೀಲರಾಗಿ ತೊಡಗಿಸಿಕೊಳ್ಳುವಂತೆ ಮಾಡಿದರು. ಉತ್ತಮ ಕೆಲಸ ನಿರ್ವಹಿಸಿದ ಹಿರಿಯ ಗೃಹರಕ್ಷಕರನ್ನು ಗುರುತಿಸಿ ತಿಂಗಳ ಗೃಹರಕ್ಷಕರು ಎಂದು ಗೌರವ ನೀಡಿ ಸನ್ಮಾನ ಮಾಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು .
ಈ ವರೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಗೃಹರಕ್ಷಕರಿಗೆ ಈ ರೀತಿ ಸನ್ಮಾನ ಮಾಡುವುದು ರಾಜ್ಯದಲ್ಲಿಯೇ ಮೊದಲು. ೨೦೨೦ರಲ್ಲಿ ಬೀಚ್ ಕ್ಲೀನಿಂಗ್ ಅಭಿಯಾನವನ್ನು ಆರಂಭಿಸಿ ಮಂಗಳೂರಿನ ಎಲ್ಲಾ ೮ ಬೀಚ್‌ಗಳನ್ನು ಎರಡೆರಡು ಬಾರಿ ಸ್ವಚ್ಚಮಾಡಲಾಯಿತು. ಗೃಹರಕ್ಷಕರಿಗಾಗಿ ಯೋಗ ತರಬೇತಿ ಶಿಬಿರವನ್ನು ಆರಂಭಿಸಿದ ಹೆಗ್ಗಳಿಕೆ ಡಾ|| ಚೂಂತಾರು ರವರಿಗೆ ಸಲ್ಲುತ್ತದೆ. ಸರಕಾರ ಇವರನ್ನು ಎರಡನೇ ಬಾರಿಗೆ ಸಮಾದೇಷ್ಟರಾಗಿ ನೇಮಕ ಮಾಡಿತು. ಉತ್ತಮ ಕಾರ್ಯಸಾಧನೆಗಾಗಿ ೨೦೧೯ ರ ಮುಖ್ಯಮಂತ್ರಿಗಳ ಚಿನ್ನದ ಪದಕಕಕ್ಕೆ ಡಾ|| ಚೂಂತಾರು ಅವರನ್ನು ಗೃಹರಕ್ಷಕ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿತು.