ಮಂಗಳೂರು: ನಗರಕ್ಕೆ ಕೇರಳ ರಾಜ್ಯ ಹಾಗೂ ಕಾಸರಗೋಡು ಗಡಿ ಭಾಗದಿಂದ ಉದ್ಯೋಗ ಹಾಗೂ ಶಿಕ್ಷಣ ನಿಮಿತ್ತ ಬಹಳಷ್ಟು ಜನ ಬರುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಓಡಾಟ ಮಾಡುವವರಿಗೆ ಕೋವಿಡ್ ತಪಾಸಣೆ ಕಡ್ಡಾಯ. ಈ ಹಿನ್ನೆಲೆಯಲ್ಲಿ ಸ್ಕ್ರೀನಿಂಗ್ ಮಾಡಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಲಪಾಡಿ ಸೇರಿದಂತೆ ಏಳು ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಈ ಚೆಕ್ ಪೋಸ್ಟ್ ಗಳ ಮೂಲಕ ಮಂಗಳೂರು ನಗರಕ್ಕೆ ಬರುವವರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದವರಲ್ಲಿ ಆರ್ ಟಿಸಿಆರ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಇರಬೇಕು . ಅವೆರಡೂ ಇಲ್ಲದಿದ್ದಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ರ್ಯಾಪಿಡ್ ಹಾಗೂ ಆರ್ ಟಿಪಿಸಿಆರ್ ತಪಾಸಣೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಸಂಚಾರ ಮಾಡುವವರು ಕೋವಿಡ್ ಮುಂಜಾಗ್ರತೆ ಕೈಗೊಳ್ಳಬೇಕು. ಪ್ರತಿಯೊಬ್ಬರೂ ಸಾರ್ವಜನಿಕರು ಈ ಬಗ್ಗೆ ಸಹಕಾರ ನೀಡಬೇಕು ಎಂದರು.
ಬಕ್ರೀದ್ ಹಬ್ಬ ಜುಲೈ 21ರಂದು ಆಚರಣೆ ಮಾಡಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆ 1-2 ಚೆಕ್ ಪೋಸ್ಟ್ ಗಳು ಸೇರಿದಂತೆ 25 ಕ್ಕೂ ಅಧಿಕ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಸರಕಾರದ ನಿಯಮದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿಲ್ಲ. ಈ ಮೂಲಕ ಅತ್ಯಂತ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ನಾಗರಿಕರು ಸಹಕರಿಸಬೇಕು ಎಂದು ಶಶಿಕುಮಾರ್ ಎನ್. ಹೇಳಿದರು.