ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರು ಉಡುಪಿಯಲ್ಲಿ ಗಡತ್ತಾಗಿ ಮಿಂಚಿದ್ದಾರೆ. ಪಂಚೆ ಕಟ್ಕೊಂಡು, ತಲೆಗೊಂದು ಹಾಳೆ ಟೊಪ್ಪಿ ಇಟ್ಕೊಂಡು, ಕೆಸರಿನ ಗದ್ದೆಗಿಳಿದಿದ್ದಾರೆ.
ಫಟಾ ಪೋಸ್ಟರ್ ನಿಕ್ಲಾ ಹೀರೋ, ಎಂತಾ ಶೂಟ್ ಮಾಡ್ಬೇಕಾ ಅಂತಾ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ರೀತಿಯಲ್ಲಿ ಹವಾ ಕ್ರಿಯೆಟ್ ಮಾಡಿದವರು ರಕ್ಷಿತ್ ಶೆಟ್ಟಿ. ಸಿಂಪಲ್ ಸ್ಟಾರ್ ಅಂತಾನೇ ಬಿರುದು ಪಟಡೆದಿರೋ ಇವ್ರು, ನಿನ್ನೆ ತಮ್ಮ ಹುಟ್ಟೂರು ಉಡುಪಿಯಲ್ಲೂ ಪಕ್ಕಾ ಸಿಂಪಲ್ ಆಗಿಯೇ ಕಾಣಿಸಿಕೊಂಡ್ಡಿದ್ದಾರೆ. ಪಂಚೆ ಕಟ್ಕೊಂಡು, ತಲೆಗೊಂದು ಮುಟ್ಟಾಲೆ ಅಂತಾ ಕರೆಸಿಕೊಳ್ಳೋ ಹಾಳೆ ಟೊಪ್ಪಿ ಹಾಕ್ಕೊಂಡು, ಕೆಸರಿನ ಗದ್ದೆಗಿಳಿದಿದ್ದಾರೆ. ಡೊಲ್ಲಿನ ಸದ್ದಿನೊಂದಿಗೆ ಗದ್ದೆಗಿಳಿದು ನೇಜಿ ನಾಟಿ ಮಾಡಿದ್ರು.
ಉಡುಪಿಯ ಭಿರ್ತಿಯಲ್ಲಿ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೇದಾರೋತ್ಥಾನ ಕಾರ್ಯಕ್ರಮವನ್ನ ಶಾಸಕ ರಘುಪತಿ ಭಟ್ ಆಯೋಜಿಸಿದ್ರು. ಈ ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡ ರಿಕ್ಕಿ ಕೃಷಿಕರಿಗೆ ಸ್ಫೂರ್ತಿ ತುಂಬಿದ್ರು. ಇನ್ನು ಈ ವೇಳೆ ಸಣ್ಣವರಿದ್ದಾಗ ಅಜ್ಜಿ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡದನ್ನ ನೆನಪಿಸಿಕೊಂಡ್ರು.
ಕಳೆದೈದು ವರ್ಷಗಳಿಂದ ಬೆಂಗಳೂರಿಗೆ ತೆರಳಿದ್ದ ಯುವಕರು ಮತ್ತೆ ತಮ್ಮೂರಿಗೆ ವಾಪಾಸ್ಸಾಗಿ ಕೃಷಿಯಲ್ಲಿ ತೊಡಗಿಸಿಕೊಳ್ತಿರೋದ್ರ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದು, ಇದೇ ಕರಾವಳಿ ಜನರ ಮುಖ್ಯ ಉದ್ದಿಮೆ ಕೃಷಿಯಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಬೇಸಾಯ ಆಗುತ್ತಿತ್ತು. ಕಳೆದ ಹತ್ತು ಹದಿನೈದು ವರ್ಷಗಳಿಂದ ಬೇಸಾಯ ಕಡಿಮೆಯಾಗುತ್ತಾ ಬಂದಿದೆ. ಕರಾವಳಿಯಲ್ಲಿ ಬೇಸಾಯ ಕೃಷಿ ನಿಂತು ಬಿಡುತ್ತಾ ಎಂಬ ಆತಂಕ ಇತ್ತು. ಶಾಸಕ ರಘುಪತಿ ಭಟ್ ಒಂದು ಉತ್ತಮ ಯೋಜನೆ ಹಾಕಿಕೊಂಡಿದ್ದಾರೆ. ಊರು ಬಿಟ್ಟವರು ಮತ್ತೆ ಊರಿಗೆ ವಾಪಸಾಗುತ್ತಿದ್ದಾರೆ. ಯುವಕರು ಮತ್ತೆ ಕೃಷಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಸಿನಿಮಾ ಮುಖಾಂತರ ಬೇಸಾಯಕ್ಕೆ ಬೆಂಬಲಿಸಲು ಪ್ರಯತ್ನ ಮಾಡುತ್ತೇನೆ. ಯೋಜನೆಗೆ ನನ್ನಿಂದಾಗುವ ಎಲ್ಲಾ ಸಹಾಯ ಮಾಡುತ್ತೇನೆ ಎಂದು ಹೇಳಿದ್ರು..
ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಆಯೋಜನೆಗೊಂಡ ಈ ಹಡಿಲು ಭೂಮಿ ನಾಟಿ ಯೋಜನೆ ಕಾರ್ಯಕ್ರಮವನ್ನೂ ರಕ್ಷಿತ್ ಶೆಟ್ಟಿ ಹಾಡಿ ಹೊಗಳಿದ್ರು. ಮುಂದಿನ ದಿನಗಳಲ್ಲಿ ಇದರಿಂದ ಬೆಳದ ಕುಚ್ಚಿಗೆ ಅಕ್ಕಿಗೆ ಅಂಬಾಸಿಡರ್ ಆಗಲೂ ಓಕೆ ಎಂದಿದ್ದಾರೆ.
ಇನ್ನು, ತಮ್ಮೂರಿನ ಮೆಚ್ಚಿನ ನಟನನ್ನು ನೋಡಬೇಕು ಅಂತಾ ಫ್ಯಾನ್ಸ್ ದಂಡೇ ನೆರದಿತ್ತು. ಶೆಟ್ರು ಜೊತೆಗೆ ಒಂದ್ ಪೋಟೋ ತೆಗೋಬೇಕು ಮಾರ್ರೆ ಅಂತಾ ನೂರಾರು ಅಭಿಮಾನಿಗಳು ಮುಗಿಬಿದ್ದಿದ್ರು. ಒಟ್ನಲ್ಲಿ, ಉಳಿದವರು ಕಂಡಂತೆ ನಾನಲ್ಲ, ನಟನೆಗೂ ಸೈ, ಕೃಷಿಗೂ ಜೈ ಅಂತಾ ಶೆಟ್ರು ರೈತರೊಂದಿಗೆ ಬೆರೆತು ಸಂಭ್ರಮ ಪಟ್ಟಿದ್ದಾರೆ. ಇದು ಹುಟ್ಟೂರಿನ ಅಭಿಮಾನಿಗಳ ಅಭಿಮಾನವನ್ನ ಮತ್ತಷ್ಟು ಹೆಚ್ಚಿಸಿದೆ.