ಮೊಬೈಲ್ ಖರೀದಿಸಲು ಸಾಕ್ಷಿ ಹಾಕಲು ಬನ್ನಿ ಎ೦ದು ನ೦ಬಿಸಿ ವೃದ್ಧೆಯೊಬ್ಬರನ್ನು ಕರೆದುಕೊ೦ಡು ಬ೦ದು ಸಹಿ ಹಾಕಿಸಿದ ಯುವಕನೊಬ್ಬ ವೃದ್ಧೆಯ ಹೆಸರಲ್ಲೆ ಸಾಲ ಮಾಡಿ ಮೊಬೈಲ್ ಖರೀದಿಸಿ ಪರಾರಿಯಾದ ಘಟನೆ ವರದಿಯಾಗಿದೆ.
ಸುಳ್ಯ ಗಾಂಧಿನಗರ ನಾವೂರು ಪರಿಸರದ 60 ವರ್ಷದ ವೃದ್ದ ಮಹಿಳೆ ಕದೀಜ ಎಂಬುವವರು ವಂಚನೆಗೆ ಒಳಗಾದ ಮಹಿಳೆ.
ಪಕ್ಕದ ಮನೆಯ ಹಾರಿಸ್ ಎಂಬ ಯುವಕ ತಾನು ನೂತನ ಮೊಬೈಲ್ ಖರೀದಿಸಲು ತಮ್ಮ ಸಾಕ್ಷಿ ಬೇಕಾಗಿದೆ ಎಂದು ನಂಬಿಸಿ ಅವರನ್ನು ಸುಳ್ಯ ಪೊಲೀಸ್ ಠಾಣೆ ಬಳಿ ಇರುವ ಮೊಬೈಲ್ ಅಂಗಡಿಗೆ ಕರೆದೊಯ್ದು ವೃದ್ಧ ಮಹಿಳೆಯ ಹೆಸರಿನಲ್ಲಿಯೇ 16 ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನನ್ನು ಫೈನಾನ್ಸ್ ಸಂಸ್ಥೆಯ ಮೂಲಕ ಖರೀದಿಸಿ ವಂಚನೆ ನಡೆಸಿದ್ದಾನೆ.
ಹಾರಿಸ್ ವೃದ್ಧ ಮಹಿಳೆ ಖದೀಜಾ ರವರ ಪಕ್ಕದ ಮನೆಯ ನಿವಾಸಿ. ಫೆಬ್ರವರಿ 22, 2020ರಲ್ಲಿ ಫೋನ್ ಖರೀದಿಸಿದ್ದು ಖರೀದಿ ಮಾಡುವ ಸಂದರ್ಭ ಮೊಬೈಲ್ ಅಂಗಡಿಗೆ ತೆರಳಿ ಫೈನಾನ್ಸ್ ಮೂಲಕ ಫೋನ್ ಖರೀದಿಸಲು ಬೇಕಾಗುವ ದಾಖಲೆಗಳ ಮಾಹಿತಿಯನ್ನು ಪಡೆದು ಕೊಂಡಿದ್ದಾನೆ. ತದನಂತರ ಕದೀಜ ರವರ ಬಳಿ ತೆರಳಿ ತಾನು ನೂತನ ಮೊಬೈಲ್ ಫೋನನ್ನು ಖರೀದಿಸುತ್ತಿದ್ದು ಅದಕ್ಕಾಗಿ ಸಾಕ್ಷಿ ನೀಡುವುದಕ್ಕಾಗಿ ತಮ್ಮ ಆಧಾರ್ ಕಾರ್ಡ್, ಹಾಗೂ ಬ್ಯಾಂಕ್ ಪಾಸ್ ಬುಕ್ಕಿನ ದಾಖಲೆಪತ್ರಗಳು ಬೇಕಾಗಿದೆ ಎಂದು ಹೇಳಿದ್ದಾನೆ. ಅವಿದ್ಯಾವಂತೆ ಆಗಿರುವ ಮಹಿಳೆ ಈತನ ಮಾತನ್ನು ನಂಬಿ ಅವನು ಕೇಳಿದ ದಾಖಲೆಗಳನ್ನು ನೀಡಿದ್ದಾರೆ. ನಂತರ ಅದನ್ನು ಮೊಬೈಲ್ ಅಂಗಡಿಗೆ ನೀಡಿ ಇದು ನಮ್ಮ ತಾಯಿಯವರ ದೆಂದು ಹೇಳಿ ಅಂಗಡಿಯವರನ್ನು ನಂಬಿಸಿದ್ದಾನೆ. ನಂತರ ಮನೆಗೆ ತೆರಳಿ ಕದೀಜ ರವರನ್ನು ಅಂಗಡಿಗೆ ಕರೆತಂದು ಅವರ ಭಾವಚಿತ್ರವನ್ನು ಮೊಬೈಲ್ನಲ್ಲಿ ತೆಗೆದು ತನಗೆ ಬೇಕಾದ ಓಟಿಪಿ ನಂಬರ್ ಮುಂತಾದವುಗಳನ್ನು ತನ್ನದೇ ಬಳಿಯಿದ್ದ ಮತ್ತೊಂದು ಮೊಬೈಲ್ ಮೂಲಕ ನೀಡಿ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡಿದ್ದಾನೆ. ಕನ್ನಡ ಭಾಷೆ ತಿಳಿಯದ ಈ ಮಹಿಳೆ ಅಂಗಡಿಯವರು ಮತ್ತು ಈತ ಮಾತನಾಡುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.
ನಂತರದ ದಿನಗಳಲ್ಲಿ ಬ್ಯಾಂಕಿಗೆ ಇಎಂಐ ಪಾವತಿಸಲು ಪ್ರತಿ ತಿಂಗಳು ಪಾವತಿಸದೆ ಎರಡು ತಿಂಗಳು,ಮೂರು ತಿಂಗಳು ಗಳನ್ನು ಬಿಟ್ಟು ಬಿಟ್ಟು ಪಾವತಿ ಮಾಡಿ ಮೊಬೈಲ್ಗೆ ನೀಡಬೇಕಾದ ಹಣವನ್ನು ಪಾವತಿಸಿರುತ್ತಾನೆ.
ಇದೀಗ ಒಂದು ವರ್ಷ ಕಳೆದ ನಂತರ ಕದೀಜ ಎಂಬವರ ಮೊಬೈಲಿಗೆ ಬ್ಯಾಂಕಿನಿಂದ ತಮ್ಮ ಖಾತೆಗೆ 18,346 ರೂ ಪಾವತಿಸಲು ಬಾಕಿ ಇದೆ ಎಂಬ ಮೆಸೇಜು ಬರಲು ಆರಂಭಿಸಿದೆ. ಇದರಿಂದ ಆತಂಕಗೊಂಡ ಖದೀಜರವರು ತನ್ನ ಹಿರಿಯ ಮಗಳನ್ನು ಬ್ಯಾಂಕಿಗೆ ಕಳುಹಿಸಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಇದರ ನಡುವೆ ತಮ್ಮ ಮನೆಯ ಗ್ಯಾಸ್ ಸಬ್ಸಿಡಿ ಬಂದ ಹಣವು ಇದರಿಂದ ಕಡಿತಗೊಳಿಸಲಾಗಿತ್ತು.
ಮೊಬೈಲ್ ಖರೀದಿಸಿ ವಂಚಿಸಿರುವ ಯುವಕನ ಮನೆಯವರು ಕಳೆದ ಒಂದು ವರ್ಷದ ಹಿಂದೆ ನಾವೂರಿನ ಮನೆಯನ್ನು ಮಾರಾಟ ಮಾಡಿ ಬೇರೆಡೆಗೆ ಹೋಗಿದ್ದಾರೆನ್ನಲಾಗಿದೆ. ಈ ಎಲ್ಲಾ ಘಟನೆಯಿಂದ ಹಾರಿಸ್ ನ ತಾಯಿಯವರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಅವನಿರುವ ಸ್ಥಳವನ್ನು ಖಚಿತವಾಗಿ ನೀಡಿಲ್ಲ ಎಂದು ತಿಳಿದುಬಂದಿದೆ. ಅವರು ನೀಡಿರುವ ದೂರವಾಣಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಬರುತ್ತಿದೆ. ಇದೀಗ ತಾನು ಖರೀದಿಸದ ವಸ್ತುವಿಗಾಗಿ ವೃದ್ಧ ಮಹಿಳೆ ಫೈನಾನ್ಸ್ ಕಂಪನಿ, ಬ್ಯಾಂಕ್, ಮೊಬೈಲ್ ಅಂಗಡಿಗಳಿಗೆ ಪರಿಹಾರವನ್ನು ಹುಡುಕಿ ನಡೆದಾಡಲು ಪ್ರಾರಂಭಿಸಿದ್ದಾರೆ. ಮೋಸಕ್ಕೆ ಒಳಗಾಗುವವರು ಇದ್ದಾಗ ಮೋಸ ಮಾಡುವವರ ಸಂಖ್ಯೆ ಕಡಿಮೆ ಇಲ್ಲ ಎಂಬಂತೆ ಆಗಿದೆ ಇದೀಗ ವೃದ್ಧ ಮಹಿಳೆ ಖದೀಜರ ಸಂಗತಿ.