ಪುತ್ತೂರು: ಬೇಸಾಯ ಪದ್ಧತಿ ಹಳ್ಳಿಗಳಲ್ಲಿ ಮರೆಯಾಗುತ್ತಿದ್ದು, ಇಂತಹ ಕಾಲಘಟ್ಟದಲ್ಲಿ ಗದ್ದೆ ಕೃಷಿಯಲ್ಲಿ ತೊಡಗಿಸಿಕೊಂಡು ಇನ್ನು ಜೀವಂತವಾಗಿಸಿಕೊಂಡಿರಬೇಕಾದುದು ಅತ್ಯಗತ್ಯ. ಶಿಕ್ಷಣ ಪಡೆದು ಪೇಟೆಗಳತ್ತ ಮುಖ ಮಾಡುವ ಬದಲು ಇಂತಹ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗದ್ದೆ ಕೃಷಿ ಕಾರ್ಯಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.
ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಭೂಮಿಯನ್ನು ತಾಯಿ ಎಂದು ಗೌರವಿಸಿ ಕೃಷಿ ಉತ್ಪನ್ನಗಳ ಮೇಲೆ ಬದುಕಬೇಕೆಂದು ಕನಸು ಕಟ್ಟಿಗೊಂಡಿರುವ ರಾಷ್ಟ್ರವಾಗಿದೆ. ದೇಶದಲ್ಲಿ ಉತ್ಪಾದಿತ ವಸ್ತುಗಳ ಬಳಕೆಯ ಸಂಕಲ್ಪ ಮಾಡಿ ಮೋದಿಯವರ ಆತ್ಮ ನಿರ್ಭರತೆಯ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ನಿಟ್ಟಿನಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ದುಪ್ಪಟ್ಟು ಉತ್ಪನ್ನವನ್ನು ಪಡೆಯಬೇಕೆಂಬ ಉದ್ದೇಶದೊಂದಿಗೆ ಹಮ್ಮಿಕೊಂಡಿರುವ ಈ ಯೋಜನೆಗೆ ಎಲ್ಲರೂ ಕೈಜೋಡಿಸುವ ಮೂಲಕ ಯಶಸ್ವಿ ಪ್ರಯೋಗಕ್ಕೆ ನಾಂದಿಯಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಸುಧಾ ಎಸ್ ರಾವ್, ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಾಮಚಂದ್ರ ಕಾಮತ್ , ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಸಂತೋಷ್ ಬಿ, ಸದಸ್ಯ ರವಿಮುಂಗ್ಲಿಮನೆ, ವತ್ಸಲಾರಾಜ್ಞಿ, ಸಚಿನ್ ಶೆಣೈ,ಕೋಶಧಿಕಾರಿ ಕೇಶವ ಮೂರ್ತಿ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಮಹೇಶ ಪ್ರಸನ್ನ, ಕಡಬದ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಘ್ನೇಶ ನಿರೂಪಿಸಿ ಜಯಗೋವಿಂದ ಶರ್ಮಾ ವಂದಿಸಿದರು.
ಭತ್ತ ಕೃಷಿಗೆ ಸಿದ್ದತೆ:
ಭತ್ತ ಕೃಷಿಯ ಮಹತ್ವವನ್ನು ತಿಳಿಸಲು ಕಾಲೇಜಿನ ಆವರಣದಲ್ಲಿ ಭತ್ತವನ್ನು ಭಿತ್ತಿ ಭತ್ತದ ಕೃಷಿಯ ಮಹತ್ವವನ್ನು ಸಮಾಜಕ್ಕೆ ತೋರ್ಪಡಿಸುವುದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ. ಇದಕ್ಕಾಗಿ ಅಂಗಳವನ್ನು ಮಣ್ಣು ಹಾಕಿ ಹದ ಮಾಡಿ, ಮಣ್ಣು ಸವೆದು ಹೋಗದಂತೆ ಸುತ್ತ ಕಟ್ಟೆ ಕಟ್ಟಿ ನೀರಿನ ಒರತೆಯಿರುವಂತೆ ನೋಡಿಕೊಂಡಿದೆ. ಭತ್ತದ ಗಿಡಗಳ ಮಧ್ಯೆ ಹುಲ್ಲು ಬೆಳೆಯದಿರಲಿ ಎನ್ನುವ ಕಾರಣಕ್ಕೆ ತೆಂಗಿನ ಮರದ ಗರಿ ಹಾಗೂ ಒಣ ಅಡಕೆ ಸಿಪ್ಪೆಗಳನ್ನು ಹರಡಲಾಗಿದೆ. ಗದ್ದೆಯ ಸುತ್ತ ನೆಟ್ ಅಳವಡಿಸಿ ಪ್ರಾಣಿ ಪಕ್ಷಿಗಳಿಂದ ರಕ್ಷಿಸಲಾಗಿದೆ.