ನವದೆಹಲಿ: ದೇಶದಲ್ಲಿ ಇನ್‍ಫ್ಲುಯೆನ್ಝಾ ವೈರಸ್ ಸೋಂಕಿಗೆ ಮೊದಲ ಬಲಿಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಲ್ಲಿ ಕಂಡುಬರುವ ವೈರಸ್ ಇದಾಗಿದ್ದು ಎಚ್5ಎನ್1 ಎಂದೂ ಕರೆಯುತ್ತಾರೆ,ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪವಾಗಿದ್ದು ಆದರೆ ಎಚ್ಚರ ಅತ್ಯಗತ್ಯವಾಗಿದೆ.
ಹರ್ಯಾಣದ ಮೂಲದ 12 ವರ್ಷದ ಬಾಲಕನಲ್ಲಿ ಜುಲೈ 2ರಂದು ಎಐಐಎಂಎಸ್‍ಗೆ( ಏಮ್ಸ್) ದಾಖಲಾಗಿದ್ದ. ಮೊದಲಿಗೆ ಬಾಲಕನಿಗೆ ಕೋವಿಡ್-19 ಸೋಂಕು ತಗುಲಿರಬೇಕು ವೈದ್ಯರು ಸಂಶಯಪಟ್ಟಿದ್ದು ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಆದರೆ ಆಳವಾದ ಸಂಶೋಧನೆ ಕೈಗೊಂಡಾಗ ಹಕ್ಕಿಜ್ವರಕ್ಕೆ ಕಾರಣವಾಗುವ ಇನ್‍ಫ್ಲುಯೆಂಜಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಜು.20ರ ಮಂಗಳವಾರ ಸಾವನ್ನಪ್ಪಿದ್ದಾನೆ.
ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್ನ ಎಲ್ಲ ಸಿಬ್ಬಂದಿಯೂ ಐಸೋಲೇಟ್ಗೆ ಒಳಗಾಗಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಏಮ್ಸ್ ವೈದ್ಯರೊಬ್ಬರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಆತನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಬಾಲಕನ ಸಂಪರ್ಕಕ್ಕೆ ಬಂದ ವೈದ್ಯರು, ದಾದಿಯರು ಸೇರಿ ಎಲ್ಲರೂ ತಮ್ಮನ್ನು ತಾವು ಐಸೋಲೇಟ್ಗೆ ಒಳಪಡಿಸಿಕೊಂಡಿದ್ದಾರೆ. ಇನ್ನೇನಾದರೂ ಅವರಲ್ಲಿ ಹಕ್ಕಿಜ್ವರದ ಯಾವುದಾದರೂ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಅವರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ವರ್ಷದ ಪ್ರಾರಂಭದಲ್ಲಿ ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಸಾವನ್ನಪ್ಪಿದ್ದವು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಇದು ಮನುಷ್ಯನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ.