ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕಾಪಿಕಾಡ್ ಉರೇಕಾ ಬಳಿ ಯುವ ಫೋಟೋಗ್ರಾಫರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯುವಕನನ್ನು ರಾಹುಲ್ ಕಾಲಿನ್ ಫರ್ನಾಂಡಿಸ್ (26) ಎಂದು ಗುರುತಿಸಲಾಗಿದೆ.
ಮೃತ ಯುವಕ ಕಿನ್ನಿಗೋಳಿಯಲ್ಲಿ ಆರ್. ಸಿ. ಎಫ್ ಹೆಸರಿನ ಫೋಟೋ ಸ್ಟುಡಿಯೋ ನಡೆಸುತ್ತಿದ್ದು ಬುಧವಾರ ರಾತ್ರಿ 10 ಗಂಟೆ ಬಳಿಕ ಏಕಾಏಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ ಅಸೌಖ್ಯದಿಂದ ಇರುವ ಕಾರಣ ಮಗ ರಾಹುಲ್ ತನ್ನ ತಂದೆ ಜೊತೆ ಮಲಗುತ್ತಿದ್ದು ತಾಯಿ ಮಧ್ಯರಾತ್ರಿ ಎರಡು ಗಂಟೆಗೆ ಬಂದು ಪರಿಶೀಲಿಸಿದಾಗ ಮಗ ನಾಪತ್ತೆಯಾಗಿರುವುದನ್ನು ಕಂಡು ಗಾಬರಿಯಾಗಿ ಹುಡುಕಾಟ ನಡೆಸಿದಾಗ ಮನೆ ಹಿಂಬದಿಯಲ್ಲಿರುವ ಬಾವಿಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ.ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಯುವಕ ರಾಹುಲ್ ಕಳೆದ ದಿನದ ಹಿಂದೆ ನನಗೆ ನಾಲ್ಕು ಲಕ್ಷ ರೂ ನ ಬೈಕ್ ಬೇಕು ಎಂದು ತಂದೆ ಜೊತೆ ಹಠಹಿಡಿದಿದ್ದ ಹಾಗೂ ಆತ್ಮಹತ್ಯೆ ಮಾಡುವುದಕ್ಕೆ ಮುನ್ನ ತನ್ನ ಫೇಸ್ಬುಕ್ ಹಾಗೂ ವಾಟ್ಸಪ್ ಡಿಲೀಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕ ರಾಹುಲ್ ಕಿನ್ನಿಗೋಳಿ ಚರ್ಚ್ ನ ಐಸಿವೈಎಂ ಘಟಕದ ಅಧ್ಯಕ್ಷನಾಗಿದ್ದು, ಉತ್ತಮ ಕ್ರೀಡಾಪಟು ಹಾಗೂ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.