ಸುಬ್ರಹ್ಮಣ್ಯ : ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಳಕ್ಕೆ ಆಗಮಿಸಿದ ಯಾತ್ರಿಕರೊಬ್ಬರ 17 ಲಕ್ಷ ಮೌಲ್ಯದ ಸ್ವತ್ತುಗಳಿದ್ದ ಬ್ಯಾಗ್ ನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಜು 21 ರಂದು ನಡೆದಿದೆ. ಅವರು ಸ್ಥಳೀಯ ಹೋಟೆಲ್ ನಲ್ಲಿ ಉಪಹಾರ ಸೇವಿಸುತಿದ್ದಾಗ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಬೈರಲಿಂಗೇನ ಹಳ್ಳಿಯ ಗಂಗಮ್ಮ ಎಂಬವರು ಲಕ್ಷಾಂತರ ಮೌಲ್ಯದ ಸ್ವತ್ತುಗಳಿದ್ದ ಬ್ಯಾಗ್ ಕಳಕೊಂಡ ಸಂತ್ರಸ್ತ ಮಹಿಳೆ. ತಲೆಗೆ ಟೊಪ್ಪಿ ಧರಿಸಿರುವ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದೂ , ಕೃತ್ಯದ ದೃಶ್ಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಂಗಮ್ಮ ಮತ್ತು ಮನೆಯವರು ಜು.20 ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸಿ ಆ ದಿನ ರಾತ್ರಿ ಸ್ಥಳೀಯ ಖಾಸಗಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮರುದಿನ ಬೆಳಗ್ಗೆ ( ಜು 21) ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಕುಟುಂಬಸ್ಥರು ಬಳಿಕ ಅಲ್ಲಿನ ರಥಬೀದಿಯ ಖಾಸಗಿ ಹೊಟೇಲ್ ಒಂದರಲ್ಲಿ ಉಪಹಾರ ಸೇವಿಸಲು ತೆರಳಿದ್ದಾರೆ. ಈ ವೇಳೆ ಗಂಗಮ್ಮ ತನ್ನ ಬಳಿಯಿದ್ದ ಬ್ಯಾಗ್ ನ್ನು ತಾನು ಕುಳಿತಲ್ಲಿಯೇ ಪಕ್ಕದಲ್ಲಿ ಇರಿಸಿದ್ದರೆನ್ನಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿ
ಮಹಿಳೆ ಬ್ಯಾಗ್ ಇರಿಸಿದಲ್ಲಿಂದ ಯಾರೋ ಟೋಪಿ ಹಾಕಿರುವ ಕಳ್ಳ ಆ ಬ್ಯಾಗ್ ನ್ನು ಎಗರಿಸಿದ್ದು, ಕಳ್ಳ ಹೊಟೇಲ್ ನಿಂದ ಹೊರಹೋಗುವುದು ಅಲ್ಲಿನ ಸಿ.ಸಿ ಕ್ಯಾಮಾರದಲ್ಲಿ ದಾಖಲಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಗ್ ನಲ್ಲಿ ಸುಮಾರು 17 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ತನಿಖೆ ನಡೆಸುತಿದ್ದಾರೆ.