ಬೆಳ್ತಂಗಡಿ: ಮಂಗಳೂರು – ಬೆಂಗಳೂರು ಹೆದ್ದಾರಿ ಹಾದುಹೋಗುವ ಶಿರಾಡಿ ಘಾಟಿಯ ದೋಣಿಗಲ್ ಎಂಬ ಪ್ರದೇಶದಲ್ಲಿ ರಸ್ತೆ ಕುಸಿತವಾಗಿರುವುದರಿಂದ ಈ ಭಾಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ಕಾರಣದಿಂದ ಕರಾವಳಿ ಭಾಗಕ್ಕೆ ಸಂಪರ್ಕ ರಸ್ತೆಯಾಗಿ ಬೆಂಗಳೂರು, ಚಿಕ್ಕಮಗಳೂರು, ಹಾಸನ ಮೊದಲಾದ ಕಡೆಗೆ ಪ್ರಯಾಣಿಸುವ ವಾಹನಗಳು ಅನಿವಾರ್ಯವಾಗಿ ಚಾರ್ಮಾಡಿ ಘಾಟಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಇದೀಗ ಜು.24ರಂದು ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಒಂದು ಬದಿಯ ರಸ್ತೆ ಕುಸಿತವಾಗಿರುವುದರಿಂದ ಈ ಪ್ರದೇಶದಲ್ಲಿ ಏಕಮುಖ ಸಂಚಾರವಷ್ಟೇ ಸಾಧ್ಯವಾಗುತ್ತಿದೆ. ಮಾತ್ರವಲ್ಲದೇ ಇನ್ನಷ್ಟು ಜೋರಾಗಿ ಮಳೆಯಾದಲ್ಲಿ ಈ ತಿರುವು ಪ್ರದೇಶದ ರಸ್ತೆಯೂ ಸಂಪೂರ್ಣ ಕುಸಿಯುವ ಅಪಾಯದಲ್ಲಿದೆ. ಸದ್ಯಕ್ಕೆ ಈ ಭಾಗದಲ್ಲಿ ಬ್ಯಾರಿಕೇಡ್ ಮತ್ತು ಎಚ್ಚರಿಕೆ ಪಟ್ಟಿಯನ್ನು ಅಳವಡಿಸಿಲಾಗಿದೆ.
ಜುಲೈ 23ರ ಸಾಯಂಕಾಲ 7ಗಂಟೆಯಿಂದ ಮುಂದಿನ ಆದೇಶ ರವರೆಗೆ ಚಾರ್ಮಾಡಿ ಘಾಟ್ ಬಂದ್
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ಮಳೆ ಉರುಳುತ್ತಿರುವ ಹಾಗೂ ಭೂಕುಸಿತ ಸಾಧ್ಯತೆ ಹಿನ್ನಲೆಯಲ್ಲಿ ಜುಲೈ 23 ಶುಕ್ರವಾರ ಸಂಜೆ 7 ಗಂಟೆಯಿಂದ ಮುಂದಿನ ಆದೇಶ ರವರೆಗೆ ಈ ಭಾಗದಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಗಲು ಹೊತ್ತು ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಯವರು ಈ ಆದೇಶವನ್ನು ಹೊರಡಿಸಿದ್ದಾರೆ. ರಸ್ತೆ ಕುಸಿತಗೊಂಡಿರುವ 6ನೇ ತಿರುವಿನಲ್ಲಿ ಮರಳಿನ ಗೋಣಿಗಳನ್ನು ಪೇರಿಸುವ ಕಾರ್ಯ ನಡೆಯಲಿದೆ.