ಪುತ್ತೂರು : ನಗರದಲ್ಲಿರುವ ಅನಧಿಕೃತ ಅಂಗಡಿಗಳನ್ನು ನಗರಸಭಾ ಪೌರಾಯುಕ್ತರು ತೆರವುಗೊಳಿಸಿದ್ದು ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ನಿಯೋಗ ಪೌರಾಯುಕ್ತರನ್ನು ಭೇಟಿ ಮಾಡಿ ಬಡ ವ್ಯಾಪಾರಸ್ಥರ ಹೊಟ್ಟೆಗೆ ಹೊಡೆಯದಂತೆ ಎಚ್ಚರಿಸಿದ ಘಟನೆ ಜು. 23ರಂದು ನಡೆಯಿತು.
ಪುತ್ತೂರಿನ ಭಾಗದ ರಸ್ತೆ ಬದಿಯಲ್ಲಿರುವ ಅನಧಿಕೃತ ಅಂಗಡಿಮುಂಗಟ್ಟುಗಳನ್ನು ಪೌರಾಯುಕ್ತರು ಬೆಳ್ಳಂಬೆಳಗೆ ತೆರವು ಕಾರ್ಯಚಾಚರಣೆ ನಡೆಸಿರುವ ಪ್ರಕ್ರಣವನ್ನು ವಿರೋಧಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ನೇತ್ರತ್ವದ ನಿಯೋಗ ಪೌರಾಯುಕ್ತರನ್ನು ಭೇಟಿಯಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ತೆರವು ಕ್ರಮವನ್ನು ವಾಪಸು ಪಡೆದುಕೊಳ್ಳಬೇಕೆಂದು ಆಗ್ರಹಿಸಿತು.
ಶ್ರೀಮಂತರ ಅನಧಿಕೃತ ಕಟ್ಟಡಗಳ ಬಗ್ಗೆ ಏನೂ ಕ್ರಮ ಕೈಗೊಳ್ಳದೆ, ಕೇವಲ ಬಡವ ವ್ಯಾಪಾರಿಗಳ ಬಗ್ಗೆ ಮಾತ್ರ ಯಾಕೆ ಕ್ರಮ..? ಎಂದ ಕಾಂಗ್ರೆಸ್ ನಾಯಕರು ನಗರ ಸಭಾ ಕಚೇರಿಯಲ್ಲಿ ಜನ ಸಾಮಾನ್ಯರ ಕೆಲಸಗಳಾಗುತ್ತಿಲ್ಲ, ವ್ಯಾಪಕ ಭ್ರಷ್ಟಾಚಾರ ತಾಂಡವಾಡುತ್ತಿದೆ, ಉದ್ಯಮ ಪರವಾನಿಗೆ ಪಡಕೊಳ್ಳುವುದೇ ಒಂದು ಸಾಹಸವಾಗಿದೆ,ಕಳಪೆ ಕಾಮಗಾರಿಗಳ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ, ಒಂದು ಜನನ ಸರ್ಟಿಫಿಕೇಟ್ ಪಡೆಯಲು ಜನರು ಬ್ರೋಕರ್ ಗಳನ್ನು ಅವಲಂಬಿಸುವ ಪರಿಸ್ಥಿತಿಯಿದೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದು ಬಿಟ್ಟು, ಬಡಜನರಿಗೆ ತೊಂದರೆಕೊಡುವ ಕೆಲಸ ಮಾಡ ಬೇಡಿ ಎಂದು ಪೌರಾಯುಕ್ತರಿಗೆ ತಾಕೀತು ಮಾಡಿದ ಕಾಂಗ್ರೆಸ್ ನಿಯೋಗ ಗೂಡಂಗಡಿಗಳ ತೆರವು ಕಾರ್ಯಾ ಚರಣೆ ಕೂಡಲೇ ನಿಲ್ಲಿಸಿ, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರುು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಅಮಲ ರಾಮಚಂದ್ರ, ಪೂರ್ಣೇಶ್ ಭಂಡಾರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸಹರಾ ಭಾನು,ಬ್ಲಾಕ್ ಕೋವಿಡ್ ಸೇವಕ್ ಸಿಂಬ್ರಾನ ಖಾನ್ ಮತ್ತಿತರರು ಉಪಸ್ಥಿತರಿದ್ದರು.