ಚಿತ್ರದುರ್ಗ: “ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರು ಮೊದಲ ಸಚಿವ ಸಂಪುಟದಲ್ಲಿಯೇ ನೋವಿನಿಂದ ಹೊರಬಂದಿದ್ದರು” ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಂಬೇಡ್ಕರ್ ಅವರಿಗೆ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರು ಲೋಕಸಭೆ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಅಲ್ಲದೇ, ಅವರಿಗೆ ಭಾರತ ರತ್ನ ಪುರಸ್ಕಾರವನ್ನು ನೀಡಲಿಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ನಾವು” ಎಂದು ದಲಿತ ಸಿಎಂ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹಾಗೂ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುತ್ತಾರೆ” ಎಂದಿದ್ದಾರೆ.
“ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದ ಬಳಿಕ ಸಿಎಂ ಆದವರು. ಕಾಂಗ್ರೆಸ್ ಜಗಜೀವನ್ ರಾಮ್ ಅವರನ್ನು ಪ್ರಧಾನಿ ಮಾಡಲಿಲ್ಲ. ಜಿ. ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿಲ್ಲ, ಬದಲಾಗಿ ಅವರನ್ನು ಸೋಲಿಸಿದರು. ಧ್ರುವನಾರಾಯಣ ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ, ಬಿ.ಎನ್.ಚಂದ್ರಪ್ಪ ಹಾಗೂ ದಲಿತ ಮುಖಂಡರನ್ನು ಸೋಲಿಸಿದರು. ಇಂದಿಗೂ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಅವರನ್ನು ಮುಂದೆ ಬರಲು ಬಿಡುತ್ತಿಲ್ಲ” ಎಂದು ಹೇಳಿದ್ದಾರೆ.
“ನಾವು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ದಲಿತರಾದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದ್ದೇವೆ. ಬಿಜೆಪಿ ಕಡಿಮೆ ಅವಧಿಯಲ್ಲಿ ಅಧಿಕಾರ ನಡೆಸಿದೆ” ಎಂದಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿದ ಅವರು, “ಸಿದ್ದರಾಮಯ್ಯ ಅವರು ಆಡಳಿತದ ನಡೆಸಿದ ಸಂದರ್ಭ ಆದಷ್ಟು ಭ್ರಷ್ಟಾಚಾರ ರಾಜ್ಯದ ಇತಿಹಾಸದಲ್ಲಿ ಯಾವ ಸರ್ಕಾರವೂ ಮಾಡಿಲ್ಲ. ಅವರು ಅರ್ಕಾವತಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.