ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ನೈವೇದ್ಯಕ್ಕಾಗಿ ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿ ವ್ಯವಸಾಯ ಮಾಡುತ್ತಿರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ಗದ್ದೆಯನ್ನು ಉತ್ತು ಹದ ಮಾಡಲಾಗಿದ್ದು, ಜು.25ರಂದು ಭತ್ತದ ನಾಟಿ ಮಾಡಲಾಯಿತು.
ಆಹಾರದಲ್ಲಿ ನಾವೆಲ್ಲ ಸ್ವಾವಲಂಭಿಯಾಗಬೇಕು:
ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಿ, ನೇಜಿ ಯಂತ್ರ ಚಾಲನೆ ಮಾಡಿ ಮಾತನಾಡಿ ಕೃಷಿ ಮತ್ತು ಋಷಿ ನಮ್ಮ ಪರಂಪರೆ, ಅದೇ ರೀತಿಯಲ್ಲಿ ನಮ್ಮ ಹಿರಿಯರು ಹೇಳಿದಂತೆ ಹಳ್ಳಿ ಭಗವಂತನ ಸೃಷ್ಟಿ, ಪೇಟೆ ಮನುಷ್ಯನ ಸೃಷ್ಟಿ, ಈ ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಸಿಗುತ್ತದೆ. ಹಳ್ಳಿಯ ಪರಿಸರ ಜೀವನ ಪದ್ಧತಿ ಮತ್ತೊಮ್ಮೆ ನಮ್ಮ ಯುವ ಪೀಳಿಗೆಗೆ ಪರಿಚಯವಾಗಬೇಕು. ನಮ್ಮ ಹಿರಿಯರು ತಲತಲಾಂತರದಿಂದ ಬೆಳೆಸಿಕೊಂಡ ಪರಂಪರೆಯನ್ನು ಮತ್ತೊಮ್ಮೆ ಉಳಿಸುವ ಕೆಲಸ ಮಾಡಬೇಕು. ಅದರ ಜೊತೆಯಲ್ಲಿ ಆಹಾರದಲ್ಲಿ ನಾವೆಲ್ಲ ಸ್ವಾವಲಂಭಿಯಾಗಬೇಕು. ಇನ್ನೊಬ್ಬರನ್ನು ನೋಡಿಕೊಂಡು ಹೊಂದಿಕೊಂಡು ಬದುಕುವ ಪರಿಸ್ಥಿತಿ ನಮ್ಮ ತುಳುನಾಡಿಗೆ ಬರಬಾರದು. ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಕೊಡಾ ಇದೇ ರೀತಿಯ ಮಾನಸಿಕತೆಯಲ್ಲಿ ಆಹಾರ ಬೆಳೆ ಬೆಳೆಸುವಲ್ಲಿ ಮುತುವರ್ಜಿ ವಹಿಸಬೇಕು. ದೇಶಕ್ಕೆ ಅನ್ನ ಕೊಡುವ ರೈತನ ಬಗ್ಗೆ ಮತ್ತೊಮ್ಮೆ ಕಾಳಜಿ ವಹಿಸಿ ಗೌರವ ನೀಡುವಂತಹ ಕೆಲಸ ಆಗಬೇಕೆಂದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರೂ ಮತ್ತು ಪ್ರಧಾನ ಅರ್ಚಕ ವಿ.ಎಸ್ ಭಟ್, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್, ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ವೀಣಾ ಬಿ.ಕೆ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಾಟಿ ಮಾಡುವ ಗದ್ದೆಯನ್ನು ನೀಡಿ ಸಹಕರಿಸಿದ ಬಾಳಗದ್ದೆ ಗೋಪಾಲಕೃಷ್ಣ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ನಿದೇರ್ಶಕ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಅತಿ ಶೀಘ್ರದಲ್ಲಿ ಫಲ ಸಿಗಲಿದೆ:
ತುಳುನಾಡಿನ ಜನ ಮತ್ತೊಮ್ಮೆ ಕೃಷಿ ಪದ್ಧತಿಯನ್ನು ಆಹಾರ ಬೆಳೆಯನ್ನು ಬೆಳೆಯುವ ಮೂಲಕ ಗ್ರಾಮೀಣ ಭಗಗದಲ್ಲಿ ಹಡಿಲು ಬಿದ್ದ ಗದ್ದೆಯನ್ನು ಮತ್ತೆ ಮರು ನಾಟಿ ಮಾಡಿ ಉತ್ಸವದ ಮಾದರಿಯಲ್ಲಿ ಪಾರಂಪರಿಕವಾಗಿ ಭಕ್ತಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಧಾರ್ಮಿಕ ದತ್ತಿ ಇಲಾಖೆ ಸಚಿವರು ಕರೆ ಕೊಟ್ಟ ಮೇರೆಗೆ ಅದನ್ನು ಸವಾಲಾಗಿ ಸ್ವೀಕರಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಇವತ್ತು ಹಡಿಲು ಬಿದ್ದ ಭತ್ತದ ಭೂಮಿಗೆ ಮತ್ತೊಮ್ಮೆ ಬೇಸಾಯಕ್ಕೆ ಚಾಲನೆ ನೀಡಿದ್ದಾರೆ. ಭಯ ಭಕ್ತಿಯಿಂದ ದೇವರ ಪ್ರಸಾದ ಹಾಕಿ ಮುಂದಿನ ದಿನಗಳಲ್ಲಿ ಫಲ ಸಿಗುವಂತೆ ಪ್ರಾರ್ಥಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.