ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ಬಳಿಕ ಕಾಂಗ್ರೆಸ್ – ಬಿಜೆಪಿ ನಡುವೆ ಟ್ವೀಟ್ ವಾರ್ ಪ್ರಾರಂಭವಾಗಿದೆ. ಬಿಎಸ್ ವೈ ಕಣ್ಣೀರು ಪದತ್ಯಾಗ’ ವಲ್ಲ ‘ಪದಚ್ಯುತಿ’ ಎಂದು ಸಾರಿ ಹೇಳುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿಕೊಳ್ಳಿ ಎಂದು ಪ್ರತ್ಯುತ್ತರ ನೀಡಿದೆ.
ಬಿಎಸ್ವೈ ಅವರ ವಿದಾಯದಲ್ಲಿ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಭೀಷ್ಮ. ಪಕ್ಷದ ಏಳಿಗೆಗಾಗಿ ಶ್ರಮಿಸಿದ ಯಡಿಯೂರಪ್ಪ ಅವರು ಪಕ್ಷದ ಶಿಸ್ತಿಗೆ ಒಳಪಟ್ಟು ಸ್ವ-ಇಚ್ಛೆಯಿಂದ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸಿದ್ಧಾಂತ, ಆಂತರಿಕ ಶಿಸ್ತಿಗೆ ಒಳಪಟ್ಟು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಹೇಳಿಕೊಂಡಿದೆ.
ಈ ವಿಚಾರದಲ್ಲಿ ಗಾಂಧಿ ಕುಟುಂಬದ ಗುಲಾಮರಿಂದ ಕಿವಿ ಮಾತು ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿ ಪಕ್ಷಕ್ಕಿಲ್ಲ ಎಂಬುದನ್ನು ಕಾಂಗ್ರೆಸ್ ಮನಗಾಣಬೇಕು.ವಿಪಕ್ಷ ನಾಯಕ ಸಿದ್ದರಾಮಯನಂತಹ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ರಾಜ್ಯ ಕಂಡಿಲ್ಲ. ಅರ್ಕಾವತಿ ಡಿನೋಟಿಫಿಕೇಶನ್ ಅವ್ಯವಹಾರದ ಜತೆಗೆ ಹಿಂದು ಕಾರ್ಯಕರ್ತರ ಕಗ್ಗೊಲೆಗೆ ಕಾರಣನಾದ ನರ ರೂಪದ ರಾಕ್ಷಸ ಎಂದರೂ ತಪ್ಪಾಗಲಾರದು ಎಂದು ಅಪಾದಿಸಿದೆ.
ಗಾಂಧಿ ಕುಟುಂಬದ ಗುಲಾಮರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ?ವಿಶ್ವದಾಖಲೆಯ ಅತಿ ದೀರ್ಘ ಅವಧಿಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರೆಯುತ್ತಿದ್ದಾರೆ. ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿಕೊಳ್ಳಿ ಎಂದು ಕಾಂಗ್ರೆಸಿಗೆ ಮಾತಿನಲ್ಲೇ ಬಿಜೆಪಿ ತಿವಿದಿದೆ.