ಬಿಎಸ್ವೈ ರಾಜೀನಾಮೆ ಬಳಿಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಅಂತ ರಾಜ್ಯದ ಜನರಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಉದ್ಭವಿಸಿತ್ತು. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಲಿಂಗಾಯತ ಸಮುದಾಯದ ಹಾಗೂ ನಿರ್ಗಮಿತ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಸವರಾಜ್ ಬೊಮ್ಮಾಯಿಗೆ ಸಿಎಂ ಪಟ್ಟ ಒಲಿದಿದೆ. ಇವತ್ತು ಬಸವರಾಜ್ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಸವರಾಜ್ ಬೊಮ್ಮಾಯಿಗೆ ಹೈಕಮಾಂಡ್ ಬಹುಪರಾಕ್: ಬಿಎಸ್ವೈ ಆಪ್ತನಿಗೆ ಮುಖ್ಯಮಂತ್ರಿ ಸಿಂಹಾಸನದ ಬಂಪರ್:
ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬಳಿಕ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜ್ಯದ ಜನ ಹಾಗೂ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿಂಹಾಸನ ಬಸವರಾಜ್ ಬೊಮ್ಮಾಯಿ ಪಾಲಾಗಿದೆ. ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರ ತಂಡದ ನೇತೃತ್ವದಲ್ಲಿ ಬೆಂಗಳೂರಿನ ಕ್ಯಾಪಿಟೆಲ್ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಬಸವರಾಜ್ ಬೊಮ್ಮಾಯಿಯವರನ್ನ ಸಿಎಂ ಆಗಿ ಆಯ್ಕೆ ಮಾಡಲಾಯ್ತು.
30ನೇ ಮುಖ್ಯಮಂತ್ರಿಯಾಗಿ ಇಂದು ಬೊಮ್ಮಾಯಿ ಪಟ್ಟಾಭಿಷೇಕ
ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಬಸವರಾಜ್ ಬೊಮ್ಮಾಯಿ, ಇಂದು ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಮದ್ ಗೆಹಲೋತ್ ನೂತನ ಸಿಎಂ ಬೊಮ್ಮಾಯಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಅಂದ್ಹಾಗೆ ಇವತ್ತು ಬೊಮ್ಮಾಯಿ ಒಬ್ರೆ ಪದಗ್ರಹಣ ಮಾಡ್ತಿದ್ದಾರೆ.
ಇನ್ನು ನೂತನ ಸಿಎಂ ಘೋಷಣೆ ಬೆನ್ನಲ್ಲೇ ಸರ್ಕಾರದಲ್ಲಿ ಮೂವರು ಡಿಸಿಎಂಗಳ ಕಾರ್ಯ ನಿರ್ವಹಣೆ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆರ್. ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗಲಿದೆ ಅನ್ನೊ ಮಾತುಗಳು ಕೇಳಿ ಬರ್ತಿದೆ ಆದ್ರೆ ಇನ್ನೂ ಅಧಿಕೃತವಾಗಿ ಡಿಸಿಎಂ ಯಾರಾಗ್ತಾರೆ ಅನ್ನೊದು ಹೊರ ಬಿದ್ದಿಲ್ಲ. ಅಷ್ಟೆ ಅಲ್ಲ ಬೊಮ್ಮಾಯಿ ಸರ್ಕಾರದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಅನ್ನೋದು ಕುತೂಹಲ ಮನೆ ಮಾಡಿದೆ. ಇನ್ನು ಬಿಎಸ್ವೈ ಸಂಪುಟದಲ್ಲಿದ್ದವರು ಬೊಮ್ಮಾಯಿ ಕ್ಯಾಬಿನೆಟ್ನಲ್ಲು ಮುಂದುವರೀತಾರಾ ಅನ್ನೋದು ಕೂಡ ಚರ್ಚೆಗೆ ಗ್ರಾಸವಾಗಿದೆ.
ಒಟ್ಟಿನಲ್ಲಿ ಬಿಎಸ್ವೈರಿಂದ ತೆರವಾದ ಸ್ಥಾನಕ್ಕೆ ಅವರ ಆಪ್ತ ಬೊಮ್ಮಾಯಿಯೇ ನೇಮಕವಾಗಿದ್ದಾರೆ. ಇಂದಿನಿಂದ ಕರ್ನಾಟಕದಲ್ಲಿ ಬೊಮ್ಮಾಯಿ ಆಡಳಿತ ಶುರುವಾಗಲಿದೆ. ಲಿಂಗಾಯತ ಸಮುದಾಯದವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ.