ನವದೆಹಲಿ: “ಮೇಕೆದಾಟು ಯೋಜನೆ ವಿರುದ್ದ ಯಾರಾದರೂ ಉಪವಾಸ ಕುಳಿತುಕೊಳ್ಳಲಿ, ಊಟವನ್ನಾದರೂ ಮಾಡಲಿ ನಮಗೆ ಸಂಬಂಧವಿಲ್ಲ. ಮೇಕೆದಾಟು ನಮ್ಮ ಹಕ್ಕು” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೇಕೆದಾಟು ಯೋಜನೆ ವಿರುದ್ದ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಅಣ್ಣಾಮಲೈ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಕರ್ನಾಟಕದ ಜನತೆಯ ನೆರವಿಗಾಗಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಿಸುತ್ತೇವೆ” ಎಂದಿದ್ದಾರೆ.
“ಮೇಕೆದಾಟು ಯೋಜನೆಯ ವಿರುದ್ದ ಯಾರು ಬೇಕಾದರೂ ಉಪವಾಸ ಸತ್ಯಾಗ್ರಹ ಮಾಡಲಿ ಅಥವಾ ಊಟವನ್ನಾದರೂ ಮಾಡಲಿ ಕಾವೇರಿ ಹೆಚ್ಚುವರಿ ನೀರಿನ ಮೇಲೆ ನಮಗೂ ಹಕ್ಕಿದೆ. ಈ ಯೋಜನೆಯನ್ನು ನಾವು ಕೈಗೆತ್ತಿಕೊಳ್ಳುವುದು ಖಂಡಿತ” ಎಂದು ಹೇಳಿದ್ದಾರೆ.