ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕರಾವಳಿಯ ಮೂವರು ಶಾಸಕರಿಗೆ ಸಚಿವ ಸ್ಥಾನ ಲಭಿಸಲಿದೆ. ಕೋಟ ಶ್ರೀನಿವಾಸ್ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಸುಳ್ಯ ಶಾಸಕ ಎಸ್ ಅಂಗಾರ ರವರಿಗೆ ಸಚಿವ ಸ್ಥಾನ ದೊರೆತಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಕೊನೆಗೂ ಸಚಿವನಾಗುವ ಭಾಗ್ಯ ಕೂಡಿ ಬಂದಿದೆ. ಬಸವರಾಜ್ ಬೊಮ್ಮಾಯಿ ನೂತನ ಸಂಪುಟದಲ್ಲಿ ಇದೀಗ ಶಾಸಕ ಸುನಿಲ್ ಕುಮಾರ್ ಗೆ ಸಿಕ್ಕಿದೆ ಸಚಿವ ಸ್ಥಾನ. ಜನಪರ ಚಿಂತಕನಾಗಿ ಸದಾ ಮಂದಹಾಸದಿಂದಲೇ ಸೇವೆ ಗೈಯುವ ಯುವನಾಯಕ ಸುನಿಲ್ ಕುಮಾರ್ ನಾಯಕತ್ವ, ಹಿಂದುತ್ವ, ಅಭಿವೃಧ್ಧಿ ಈ ಮೂರು ಪ್ರಮುಖ ವಿಷಯಗಳ ಆಧಾರವನ್ನಿಟ್ಟು ರಾಜಕಾರಣ ಜೀವನದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದವರು. ಸಾಕಷ್ಟು ಹೊಸತನಗಳನ್ನು ತನ್ನ ಕ್ಷೇತ್ರದಲ್ಲಿ ಆವಿಷ್ಕಾರ ಮಾಡುತ್ತಲೇ ಚಿರಪರಿಚಿತರಾಗಿರುವವರು. ಇಷ್ಟೇ ಅಲ್ಲ ಸಾವಿರಾರು ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ಗೈಯುತ್ತಾ ಸಾಮಾಜಿಕ ನ್ಯಾಯ ಕಾಪಾಡುವಲ್ಲಿ ಇವರ ಪಾತ್ರವೂ ಅನನ್ಯವಾಗಿದೆ.
ಕರಾವಳಿ ಭಾಗದ ಪ್ರಭಾವಿ ಮುಖಂಡನಾಗಿರುವ ಸುನಿಲ್ ಕುಮಾರ್, ಈ ಹಿಂದೆಯೇ ಸಚಿವರಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಚಿವ ಸ್ಥಾನ ಸಿಕ್ಕಿರಲಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದೂವರೆ ವರ್ಷ ಬಾಕಿ ಇರುವುದರಿಂದ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಅಸ್ತು ಎಂದಿದೆ ಎನ್ನಲಾಗಿದೆ.
ಹಿಂದುತ್ವ ಪರ ನಿಲುವು, ಸ್ಪಷ್ಟ ಭಾಷಣಕಾರನಾಗಿ ಜನರ ನಾಡಿ ಮಿಡಿತ ಅರಿಯುವ ನಾಯಕನಾಗಿ ಸುನೀಲ್ ಕುಮಾರ್ ಹೈ ಕಮಾಂಡ್ ಹಾಗೂ ಬಿ.ಎಸ್ ಯಡಿಯೂರಪ್ಪ ಎರಡೂ ಕಡೆಯಿಂದಲೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ಆರ್.ಎಸ್.ಎಸ್ ನಾಯಕರ ಬೆಂಬಲ ಜತೆಗೆ ಸಮುದಾಯದ ಬಲವೂ ಇರುವುದರಿಂದ ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಸೂಕ್ತ ಆಯ್ಕೆ ಎಂಬ ಮಾತು ಕೇಳಿಬಂದಿದೆ. ಪ್ರಾದೇಶಿಕ ಸಮತೋಲನ ಹಾಗೂ ಜಾತಿ ಸಮೀಕರಣದ ನಿಟ್ಟಿನಿಂದಲೂ ಶಾಸಕ ಸುನಿಲ್ ಗೆ ಸಚಿವ ಸ್ಥಾನ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿನ್ನೆಲೆಯನ್ನು ಹೊಂದಿರುವ ದಲಿತ ಸಮುದಾಯದ ಎಸ್. ಅಂಗಾರ ಅವರಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವ ಸ್ಥಾನ ಲಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತ ಆರು ಬಾರಿ ಶಾಸಕರಾಗಿರುವ ಹೆಗ್ಗಳಿಕೆ ಇವರದ್ದು. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ನಡೆಸದ ಎಸ್. ಅಂಗಾರ ಅವರಿಗೆ ಹೈಕಮಾಂಡ್ ಸೂಚನೆಯಂತೆ ಮಂತ್ರಿ ಸ್ಥಾನ ನೀಡಲಾಗಿದೆ.

ಎಸ್. ಅಂಗಾರ ರಾಷ್ಟ್ರೀಯ ಸ್ವಯಂ ಸ್ವೇವಾ ಸಂಘದ ಹಿನ್ನೆಲೆಯಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ದಲಿತ ಸಮುದಾಯದಿಂದ ಬಂದಿರುವ ಎಸ್ ಅಂಗಾರ ಸುಳ್ಳ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸಂಘದ ಸೂಚನೆಯಂತೆ ಕಣಕ್ಕಿಳಿದವರು. ಬಿಜೆಪಿ ಹಾಗೂ ಸಂಘಪರಿವಾರದ ಪ್ರಬಲ ಹಿಡಿತ ಹೊಂದಿರುವ ಸುಳ್ಳದಲ್ಲಿ ಎಸ್ ಅಂಗಾರ ಅವರನ್ನು ಜನರು ಸತತವಾಗಿ ಗೆಲ್ಲಿಸಿದ್ದಾರೆ. ಸೌಮ್ಯ ಸ್ವಭಾವದ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಅದರಂತೆ ಕಳೆದ ಬಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು ಆದೇ ರೀತಿ ಈ ಸಲವೂ ಎಸ್ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಿದೆ.
ಕರಾವಳಿ ಭಾಗದ ಪ್ರಭಾವಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿದು ಬಂದಿದೆ. ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ 54 ವರ್ಷದ ಕೋಟ ಶ್ರೀನಿವಾಸ ಪೂಜಾರಿ ಪಕ್ಷದಲ್ಲಿ ತಳಮಟ್ಟದಿಂದ ಬೆಳೆದು ಬಂದವರು. ಪಕ್ಷ, ಸಂಘ ಪರಿವಾರಕ್ಕೆ ನಿಷ್ಠರು, ಅಪಾರವಾದ ಜನಪರ ಕಾಳಜಿ ಹೊಂದಿರುವ ಕೆಲವು ನಾಯಕರಲ್ಲಿ ಒಬ್ಬರು.
ಮೂರು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಪರಿಷತ್ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಬ್ರಹ್ಮಾವರ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದು ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡರು. ಪಕ್ಷದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.