ಬಂಟ್ವಾಳ : ಕೊರೋನಾದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರಕಾರದ ನಿರ್ದೇಶನದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದು, ಬಂಟ್ವಾಳ ತಾಲೂಕು ಕಾರಿಂಜದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ತೀರ್ಥಸ್ನಾನವನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 8 ರಂದು ಆಟಿ ಅಮಾವಾಸ್ಯೆಯಂದು ಭಕ್ತಾಭಿಮಾನಿಗಳು ಇಲ್ಲಿನ ಗದಾ ತೀರ್ಥದಲ್ಲಿ ತೀರ್ಥಸ್ನಾನ ನಡೆಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಆದರೆ ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವುದರಿಂದ ತೀರ್ಥಸ್ನಾನಕ್ಕೆ ಅವಕಾಶ ನೀಡಲಾಗುವುದಿಲ್ಲ. ನಿಯಮ ಪಾಲನೆ ಅನುಷ್ಠಾನಕ್ಕಾಗಿ ಆ ದಿನದಂದು ಗದಾ ತೀರ್ಥದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು, ಭಕ್ತಾಧಿಗಳು ಸಹಕರಿಸಬೇಕಾಗಿ ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ತಿಳಿಸಿದ್ದಾರೆ.