ಮಂಗಳೂರು: ಉಳ್ಳಾಲದ ಕೆಲವು ಯುವಕರಿಗೆ ಉಗ್ರರೊಂದಿಗೆ ನಂಟು ಇರುವುದು ಇದೀಗ ಸಾಬೀತಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಎನ್ಐಎ ಶಾಶ್ವತ ಕಚೇರಿ ಹಾಗೂ ಸೇನಾ ನೆಲೆ ತೆರೆಯಲು ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತದೆ ಎಂದು ವಿ.ಹಿಂ.ಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಗುರುವಾರ ತೊಕ್ಕೊಟ್ಟಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು,
ಐಸಿಸ್ ಉಗ್ರರೊಂದಿಗೆ ನಂಟು ಇರುವ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಬುಧವಾರ ಹಲವು ಕಡೆ ದಾಳಿ ನಡೆಸಿದ್ದು, ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರ ಮೊಮ್ಮಗ ಅಮ್ಮರ್ ಅಬ್ದುಲ್ ರಹಮಾನ್ ನನ್ನು ಬಂಧಿಸಿದ್ದಾರೆ. ಆತ ಸಾಮಾಜಿಕ ಜಾಲತಾಣದ ಮೂಲಕ ಉಗ್ರಗಾಮಿ ಸಂಘಟನೆಗೆ ಹಣ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಬಂಧನ ನಡೆದಿದೆ. ಈ ಘಟನೆ ಜಿಲ್ಲೆಗೆ ಕಪ್ಪುಚುಕ್ಕೆಯೂ ಹೌದು, ಹಾಗೆಯೇ ಜಿಲ್ಲೆಯ ಜನ ಭಯಭೀತರಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹೇಳಿದರು.
ಐಸಿಸ್ ನಂಟಿನ ಕಾರಣದಿಂದ ಎನ್ಐಎಯಿಂದ ಬಂಧಿತನಾದ ಉಳ್ಳಾಲದ ಬಾಷಾ ಕುಟುಂಬದ ಅಮ್ಮರ್ ಅಬ್ದುಲ್ ರಹಮಾನ್ ನಂತಹ ಹಲವು ಯುವಕರು ಐಸಿ ಸ್ ನೊಂದಿಗೆ ನಂಟು ಇರಬಹುದು ಎಂದು ಸಂಶಯಿಸಿದ ಅವರು ಜಿಲ್ಲೆ ಹಾಗೂ ಕರಾವಳಿಯ ಕೇಂದ್ರಸ್ಥಾನವಾದ ಮಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ ಹಾಗೂ ಸೇನಾ ನೆಲೆ ತೆರೆಯಲು ಆಗ್ರಹಿಸಿದರು.
ಬಂಧಿತ ಆರೋಪಿಯ ಕುರಿತಾಗಿ ವಿಶೇಷವಾದ ತನಿಖೆ ನಡೆಸಬೇಕಿದೆ. ಆತನ ಜೊತೆ ಕೈಜೋಡಿಸಿದವರು, ಆತನ ನಂಟಿನ ಕುರಿತು ಪತ್ತೆ ಹಚ್ಚಬೇಕು.
ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ದೇಶದ ಯಾವುದೇ ಮೂಲೆಯಲ್ಲಿ ಬಂಧನವಾದರೂ ಆ ಉಗ್ರರ ಜೊತೆಗೆ ಜಿಲ್ಲೆಯ ನಂಟು ಕಂಡು ಬಂದಿದೆ. ಭಟ್ಕಳದ ಉಗ್ರಗಾಮಿಗಳಾಗಿರುವ ಭಟ್ಕಳ ಸಹೋದರರು ಕೂಡಾ ಇಲ್ಲಿಯ ನಂಟು ಹೊಂದಿರುವವರಾಗಿದ್ದು ಆ ಸಂದರ್ಭ ಬಾಂಬ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯೊಬ್ಬನನ್ನು ಮುಕ್ಕಚ್ಚೇರಿಯಿಂದ ಬಂಧಿಸಲಾಗಿರುವುದು ನೆನಪಿಸಬೇಕಾದ ಸಂಗತಿ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗ ದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ವಿಶ್ವ ಹಿಂದು ಪರಿಷತ್ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ ಹಾಗೂ ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ಉಪಸ್ಥಿತರಿದ್ದರು.