ಪುತ್ತೂರು: ಕೈಕಾರ ಬೆಟ್ಟಂಪಾಡಿ ಗ್ರಾಮದ ಇರ್ದೆ ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಮನೆಗೆ ಪದ್ಮಶ್ರೀ ಸೋಲಾರ್ ವತಿಯಿಂದ ವಿದ್ಯುತ್ ವ್ಯವಸ್ಥೆ ಮಾಡಲಾಯಿತು.
ಹತ್ತನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಮೋಕ್ಷಿತಾ. ಆದರೆ ಮನೆಯಲ್ಲಿ ತೀರದ ಬಡತನ, ಇರುವ ಪುಟ್ಟದಾದ ಮನೆಯೊಳಗೆ ಚಿಮಿಣಿ ದೀಪವೇ ಇವರ ಓದಿಗಾಸರೆ.. ಯಾವ ವಿದ್ಯುತ್ ಸಂಪರ್ಕವೇ ಇಲ್ಲ.. ಇದನ್ನು ಅರಿತ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಕೆ, ಶಿಕ್ಷಕರಾದ ರಾಮಚಂದ್ರ ಹಾಗೂ ವಿದ್ಯಾಲಕ್ಷ್ಮಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರಿಗೂ ತಿಳಿಸಿದಾಗ ಈ ಸಮಸ್ಯೆಯನ್ನು ಗುರುತಿಸಿ ಈ ಬಗ್ಗೆ ಸೀತಾರಾಂ ರೈ ಕೆದಂಬಾಡಿಗುತ್ತು ಅವರಲ್ಲಿಯೂ ಪ್ರಸ್ತಾಪಿಸಿದಾಗ ವಿದ್ಯಾರ್ಥಿನಿಯ ಮನೆಗೆ ಸೋಲಾರ್ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದು, ಮುಂದೆಯೂ ಪದ್ಮಶ್ರೀ ಸೋಲಾರ್ ಸಂಸ್ಥೆಯು ವಿದ್ಯುತ್ ಸಂಪರ್ಕ ಇಲ್ಲದ ಬಡ ಕುಟುಂಬಗಳು ವಿಶೇಷವಾಗಿ ವಿದ್ಯಾರ್ಥಿಗಳ ಮನೆಗೆ ಸೋಲಾರ್ ವ್ಯವಸ್ಥೆ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಮನೆಯವರು, ಸಮೀರ್ ಪರ್ಲಡ್ಕ, ಶಾಲಾ ಶಿಕ್ಷಕರು, ಪದ್ಮಶ್ರೀ ಸೋಲಾರ್ ಸಿಬ್ಬಂದಿಗಳು ಉಪಸ್ಥಿತರಿದ್ದರು.