ಬೆಳ್ತಂಗಡಿ : ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಿ, ಹೆಣ್ಮಕ್ಕಳು ಮನೆಯಲ್ಲೇ ಕುಳಿತು ಸುಲಭವಾಗಿ ಹಣಗಳಿಸಬಹುದು ಇಂತಹ ಜಾಹೀರಾತುಗಳು ಇದೀಗ ವಾಟ್ಸಾಪ್- ಸಾಮಾಜಿಕ ಜಾಲತಾಣಗಳಲ್ಲಿ ಧಾರಳವಾಗಿ ಕಂಡು ಬರುತ್ತಿವೆ. ಆದರೆ ದಯವಿಟ್ಟು ಇಂತಹ ಜಾಹೀರಾತುಗಳಿಗೆ ಮರುಳಾಗಿ ಬಲಿಯಾಗದಿರಿ.
ಇಂತಹುದೇ ಜಾಹೀರಾತಿಗೆ ಮರುಳಾಗಿ ಬೆಳ್ತಂಗಡಿಯ ಮಹಿಳೆಯೊಬ್ಬರು ಐದು ಲಕ್ಷಕ್ಕೂ ಹೆಚ್ಚು ಹಣ ಕಳಕೊಂಡಿರುವ ಘಟನೆ ಸಂಭವಿಸಿದೆ. ಹಣ ಕಳಕೊಂಡ ಮಹಿಳೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಪೂರ್ಣಿಮಾ ಎಂಬವರು ಹಣ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಈಕೆಗೆ ಅಪರಿಚಿತ ಸಂಖ್ಯೆಯಿಂದ ತಿಂಗಳಿಗೆ ಮೂರು ಸಾವಿರದಿಂದ ಎಂಟು ಸಾವಿರದವರೆಗೆ ಗಳಿಸಬಹುದು ಎಂಬ ಸಂದೇಶ ಬಂದಿತ್ತು, ಅದಕ್ಕೆ ಪೂರ್ಣಿಮಾ ಅವರು ಮೆಸೇಜ್ ಮಾಡಿ ಸಂಪರ್ಕಿಸಿದ್ದಾರೆ. ಬಳಿಕ ಆ ವ್ಯಕ್ತಿ ನಿರಂತರವಾಗಿ ಟಾಸ್ಕ್ ಹೇಳಿ ಆಕೆಯಿಂದ ಹಂತ ಹಂತವಾಗಿ ಹಣ ಪಡೆದು ಕೊಂಡಿದ್ದಾರೆ.
ಕ್ರೆಡಿಟ್ ಕರ್ಡ್ ಮೂಲಕ ಪೂರ್ಣಿಮಾ ಅವರು ಜೂನ್ ತಿಂಗಳಿನಿಂದ ಹಣ ಸಂದಾಯ ಮಾಡುತ್ತಾ ಬಂದಿದ್ದಾರೆ. ಜುಲೈ 5ರಂದು ಆಕೆ ಸುಮಾರು ಮೂರು ಲಕ್ಷ ಕ್ಕೂ ಹೆಚ್ಚು ಹಣ ಸಂದಾಯ ಮಾಡಿರುವುದಾಗಿ ಹಾಗು ಒಟ್ಟು ಐದು ಲಕ್ಷ ಕ್ಕೂ ಹೆಚ್ಚು ಹಣ ಕಳೆದುಕೊಂಡಿರುವುದಾಗಿ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.