ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಪದವಿಪೂರ್ವ ಕಾಲೇಜಿನ ಪ್ರೌಢ ವಿಭಾಗದ ಶಿಕ್ಷಕ ಗುರುರಾಜ್ ತನ್ನದೇ ವಿದ್ಯಾರ್ಥಿನಿಗೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ಕಾಲೇಜು ವಠಾರದಲ್ಲಿ ಸಾರ್ವಜನಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಅ.11 ರಂದು ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರ ಆರೋಪಿ ಶಿಕ್ಷಕನನ್ನು ಉದ್ಯೋಗದಿಂದ ವಜಾ ಮಾಡಬೇಕು ಹಾಗೂ ಆತನ ಮೊದಲನೇ ಮದುವೆಯಾದಲ್ಲಿಂದಲೇ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಾದ ಹಾಗೂ ಬಂಧನವಾದ ಎರಡು ದಿನದೊಳಗಡೆ ಆರೋಪಿಗೆ ಜಾಮೀನು ದೊರೆತಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಈ ಬೆಳವಣಿಗೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೊಂದು ಆಘಾತಕಾರಿ ಬೆಳವಣಿಗೆ ಎಂದಿರುವ ಪ್ರತಿಭಟನ ನಿರತ ಮುಂದಾಳುಗಳು ಜಾಮೀನು ಸಿಗಲು ಪೊಲೀಸ್ ವೈಫಲ್ಯವೇ ಕಾರಣ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ ಹಾಗೂ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಕಿಡಿ ಕಾರಿದ್ದಾರೆ.
ಅತ್ಯಾಚಾರದ ಗುರುತರ ಪ್ರಕರಣ ಹಾಗೂ ಪೋಕ್ಸೋ ದಂತಹ ಕಠಿಣ ಕಾನೂನು ಇದ್ದರೂ ಆರೋಪಿಯು ಕೇವಲ ಎರಡೇ ದಿನದಲ್ಲಿ ಬಿಡುಗಡೆಯಾಗುತ್ತಾನೆ ಎಂದಾದರೇ ದೇಶದ ನ್ಯಾಯ ವ್ಯವಸ್ಥೆ ಯಾವ ಪಾತಾಳ ತಲುಪಿದೆ ಎನ್ನುವುದನ್ನು ಸೂಚಿಸುತ್ತಾದೆ . ಇದು ಮನೆಯ ಹೆಣ್ಣು ಮಗಳು ಹೊರ ಹೋಗದಂತಹ ವಾತಾವರಣ ಸೃಷ್ಟಿಸಿದೆ . ಹೀಗಾಗಿ ಕೊವೀಡ್ ಕಠಿಣ ನಿಯಾಮಾವಳಿಗಳು ಇದ್ದರೂ ನಾವಿಂದು ಬೀದಿಗೆ ಬರಬೇಕಾಯಿತು ಎಂದು ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮುಕ ಶಿಕ್ಷಕನಿಗೆ ಪ್ರವೇಶವಿಲ್ಲ :
ಅತ್ಯಾಚಾರ ನಡೆಸಿದ ಆ ಕಾಮುಕ ಶಿಕ್ಷಕ ಇನ್ನುಮುಂದೆ ನಮ್ಮ ಈ ವಿದ್ಯಾಸಂಸ್ಥೆಗೆ ಬರಬಾರದು. ನಮ್ಮ ಮೈದಾನಕ್ಕೂ ಕಾಲಿಟ್ಟರೂ ನಾವು ಸುಮ್ಮನಿರುವುದಿಲ್ಲ. ಆಡಳಿತ ಮಂಡಳಿಯವರು ಈಗಾಗಲೇ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ ಆದರೆ ಅವನು ಮತ್ತೆ ಆ ವೃತ್ತಿಯಲ್ಲಿ ಇಲ್ಲಿ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ ಎಂದು ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜೇಶ್ ಎನ್ ಎಸ್ ಎಚ್ಚರಿಕೆ ನೀಡಿದ್ದಾರೆ.
ಮೊದಲಿನ ಪತ್ನಿಯ ಸಾವಿನ ತನಿಖೆಯಾಗಬೇಕು :
“ಇದೊಂದು ಗುರುತರ ಪ್ರಕರಣ. ಇಲ್ಲಿ ಹೀನ ಕೃತ ಎಸಗಿದ ಆರೋಪಿ ಶಿಕ್ಷಕ . ಹೀಗಾದರೆ ಮನೆ ಹೆಣ್ಣು ಮಕ್ಕಳನ್ನು ಯಾವ ಧೈರ್ಯ ದಲ್ಲಿ ಶಾಲೆಗೆ ಕಳುಹಿಸುವುದು ?. ಆರೋಪಿ ಶಿಕ್ಷಕನ ಮೊದಲನೇ ಹೆಂಡತಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಅದರ ತನಿಖೆ ನಡೆಸಬೇಕೆಂದು ಎಂದು ಬಿಜೆಪಿ ನಾಯಕಿ ಪುಲಸ್ತ್ಯಾ ರೈ ಆಗ್ರಹಿಸಿದ್ದಾರೆ.
ರಾಮರಾಜ್ಯದ ಕನಸಿಗೆ ಕಳಂಕ :
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿಯವರು ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಕಾಲ ಬಂದಿದೆ. ಎರಡೇ ದಿವಸದಲ್ಲಿ ಆರೋಪಿ ಹೊರ ಬಂದಿರುವ ವಿಚಾರ ದಿಗ್ಬ್ರಮೆ ಮೂಡಿಸಿದೆ. ಗಾಂಧಿಯ ರಾಮರಾಜ್ಯ ಕನಸ್ಸಿಗೆ ಆ ಶಿಕ್ಷಕ ಕಳಂಕ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಛಾಲಕ ಕಿಶೋರ್ ಶಿರಾಡಿ ಮಾತನಾಡಿ, ಫೋಕ್ಸೋ ಕಾನೂನು ಇರುವುದೇ ಇಂತಹ ದೌರ್ಜನ್ಯಕ್ಕೆ ನ್ಯಾಯ ಒದಗಿಸಲು. ಈ ಕೃತ್ಯ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಆಗಿದೆ ಅಂದುಕೊಂಡು ನಾವು ಹೋರಾಟ ಮಾಡಬೇಕು . ನಮಗಿರುವ ಮಾಹಿತಿ ಪ್ರಕಾರ ಆರೋಪಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಹೀಗಾಗಿ ನಾವು ಕಾನೂನನ್ನು ಲೆಕ್ಕಿಸದೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಈ ಪ್ರಕರಣ ತಂದೊಡ್ಡಿದೆ . ಈ ದೌರ್ಜನ್ಯ ಭಯೋತ್ಪಾದನೆಕ್ಕಿಂತ ಹೀನ ಕೃತ್ಯ. ಇಂತವನಿಗೆ ದೊಣ್ಣೆಯ ಪೆಟ್ಟೊಂದೇ ಮದ್ದು ಎಂದರು.
ಶಿಕ್ಷಕ ಗುರುರಾಜ್ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಜೆಕ್ಟ್ ಕೆಲಸ ಹಾಗೂ ಟ್ಯೂಷನ್ ನೆಪದಲ್ಲಿ ಮನೆಗೆ ಕರೆಯಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅತ್ಯಾಚಾರ ಮಾಡಿದ ಬಗ್ಗೆ ವಿದ್ಯಾರ್ಥನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ ನಡೆದಿದೆ ಹಾಗೂ ಕೃತ್ಯವನ್ನು ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಕೂಡ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಶಿಕ್ಷಕನ ವಿರುದ್ದ ಫೋಕ್ಸೋ ಹಾಗೂ ಐಟಿ ಕಾನೂನಿನಯಡಿ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.