ಕಾರ್ಕಳ: ಆನ್ ಲೈನ್ ಮೂಲಕ ಗೂಗಲ್ ಆಪ್ ನಲ್ಲಿ ಸಾಲ ಪಡೆಯಲು ಯತ್ನಿಸಿ ಕಾರ್ಕಳ ಯುವಕನೋರ್ವ ಮೋಸಕ್ಕೆ ಒಳಗಾಗಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.
ಕಾರ್ಕಳದ ಮುಂಡ್ಕೂರಿನ ಸಿರಾಜ್ (26)ಆನ್ ಲೈನ್ ನಲ್ಲಿ ಸಾಲ ಪಡೆಯುವ ಬಗ್ಗೆ ಗೂಗಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಹೆಸರು ಮೊಬೈಲ್ ಸಂಖ್ಯೆ ಗಳನ್ನು ಅಪ್ಲೋಡ್ ಮಾಡಿದ್ದರು. ಮೂರು ದಿನಗಳ ನಂತರ (+918343839550) ಅಪರಿಚಿತ ನಂಬರ್ ನಿಂದ ಯುವಕನಿಗೆ ಕರೆ ಬಂದಿದ್ದು ಮುದ್ರಾ ಲೋನ್ ನಿಂದ ಕರೆ ಮಾಡುತ್ತಿರುವುದಾಗಿ ಆ ವ್ಯಕ್ತಿ ಹೇಳಿದ್ದಾನೆ. ಟ್ಯಾಕ್ಸ್ ಕಟ್ಟುವಂತೆ ಯುವಕನಿಗೆ ಹೇಳಿ ಹಂತ ಹಂತವಾಗಿ 1,97,400 ಲಕ್ಷ ರೂ. ಹಣ ಖಾತೆಗೆ ವರ್ಗಾವಣೆಗೊಳಿಸಿಕೊಂಡಿದ್ದ.
ಸ್ವಲ್ಪ ದಿನಗಳ ಬಳಿಕ ಮತ್ತೋರ್ವ ಅಪರಿಚಿತ ವ್ಯಕ್ತಿ ಕರೆಮಾಡಿ ಲೋನ್ ಕೊಡಿಸುವುದಾಗಿ ಹಾಗೂ ಕಳೆದುಕೊಂಡ ಹಣ ವಾಪಾಸ್ ದೊರಕಿಸಿಕೊಡುವುದಾಗಿ ಹೇಳಿ 39,300 ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ. ಆನಂತರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ಕರೆ ಮಾಡಿದವರು ಸಾಲವನ್ನು ನೀಡದೆ ಹಣವನ್ನು ವಾಪಾಸ್ ನೀಡದೆ ಮೋಸ ಮಾಡಿದ್ದು ಈ ಘಟನೆಯಲ್ಲಿ ಒಟ್ಟಾರೆ 2.36 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.