ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಈಗಾಗಲೇ ನಡೆದಿರುವ ಭತ್ತ ಬೆಳೆಯೋಣ ಬಾ ಗದ್ದೆಗಿಳಿಯೋಣ ಆಂದೋಲನದ ಯಶಸ್ವಿಯಾಗಿ ನಡೆದಿದ್ದು, ಇದೀಗ ಆ.೧೩ರಂದು ಬೆಳಿಗ್ಗೆ ದೇವಳದ ದೇವರಮಾರು ಗದ್ದೆಯಲ್ಲಿ ‘ಅಂಗಳದಲ್ಲಿ ಅಕ್ಕಿ’ ವಿನೂತನ ಶೈಲಿಯಲ್ಲಿ ಭತ್ತ ಬೆಳೆಯುವ ಬಗ್ಗೆ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷತೆ ನಡೆಯಿತು.
ಭತ್ತ ಬೆಳೆಸಿ ಸ್ವಾಭಿಮಾನದ ಬದುಕು ಕಟ್ಟೋಣ:
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಅಂಗಳದಲ್ಲಿ ಅಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹತ್ಮಾ ಗಾಂಧೀಜಿಯವರ ಸ್ವಾವಲಂಭನೆಯ ಚಿಂತನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪರಿಕಲ್ಪಣೆಗೆ ತಂದು ಸ್ವಾಭಿಮಾನದ ಬದುಕನ್ನು ತೋರಿಸಿದರು. ಇವತ್ತಿನ ಪೀಳಿಗೆಗೆ ಇಂತಹ ಬದುಕನ್ನು ಕಲಿಸುವ ಕೆಲಸ ಆಗಬೇಕು. ಮಹಾಲಿಂಗೇಶ್ವರ ದೇವಸ್ಥಾನದ ಮಾರ್ಗದರ್ಶನದಲ್ಲಿ ಸುಮಾರು ನೂರು ಎಕ್ರೆಗೂ ಮಿಕ್ಕಿ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನ ಬೇಸಾಯಿಂದ ಬಂದ ಬೆಳೆ ದೇವಳದ ನೈವೈದ್ಯಕ್ಕೆ ಸಿಗುವಂತಗಾಲಿ ಎಂದು ಹೇಳಿದರು.
ಮನೆ ಮನೆಯ ಅಂಗಳದಲ್ಲಿ ಅಕ್ಕಿ ಬೇಸಾಯ ಪ್ರೇರಣೆಯಾಗಲಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಯೋಚನೆ ಮೇರೆಗೆ ಶಾಸಕರ ಇಚ್ಚೆಯಂತೆ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಹಡಿಲು ಬಿದ್ದ ಗದ್ದೆಯಲ್ಲಿ ಬೇಸಾಯ ಮಾಡುವ ಕುರಿತು ಪುತ್ತೂರಿನ ವಿವಿಧ ದೇವಸ್ಥಾನಗಳ ಮೂಲಕ ಚಿಂತನೆ ಮಾಡಿದಂತೆ ದೇವರ ಅನುಗ್ರಹದಿಂದ ನೂರಕ್ಕೂ ಮಿಕ್ಕಿ ಎಕ್ರೆಯಲ್ಲಿ ಗದ್ದೆ ಬೇಸಾಯ ಯಶಸ್ವಿಯಾಗಿ ನಡೆದಿದೆ. ಇದೇ ಸಂದರ್ಭದಲ್ಲಿ ಸಣ್ಣ ಸಣ್ಣ ಭೂಮಿಯಲ್ಲಿ ಹೇಗೆ ಭತ್ತ ಬೇಸಾಯ ಮಾಡಬಹುದು ಎಂಬ ಚಿಂತನೆ ಮೂಡಿದಾಗ ಶಾಸಕ ಸಂಜೀವ ಮಠಂದೂರು, ಶ್ರೀರಾಮ ಆಯಿಲ್ ಮಿಲ್ ಸಂತೋಷ್ ಅವರು ಸ್ವತಃ ಅವರ ಮನೆಯಲ್ಲಿ ಅಂಗಳದಲ್ಲಿ ಅಕ್ಕಿ ಬೇಸಾಯ ಮಾಡಿರುವುದು ನಮಗೆ ಪ್ರೇರಣೆಯಾಗಿ ದೇವಳದ ದೇವರಮಾರು ಗದ್ದೆಯಲ್ಲಿ ಇಲ್ಲಿನ ವ್ಯವಸ್ಥೆಗೆ ತಕ್ಕಂತೆ ಅಂಗಳದಲ್ಲಿ ಅಕ್ಕಿ ಬೇಸಾಯ ಮಾಡಿದ್ದೇವೆ. ಇದು ಮನೆ ಮನೆಯಲ್ಲಿ ಅವರಿಗೆ ಇರುವ ಜಾಗದ ಮಿತಿಯಲ್ಲಿ ಭತ್ತ ಬೆಳೆಸಲು ಪ್ರೇರಣೆಯಾಗಲಿ. ಮುಂದೆ ಸಾವಿರಾರು ಎಕ್ರೆ ಭತ್ತ ಬೇಸಾಯ ಆಗಲಿ ಎಂದರು.
ಮುಂದಿನ ಪೀಳಿಗೆಗೆ ಅರಿವು ಅಗತ್ಯ:
ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಅವರು ಮಾತನಾಡಿ ದೇವರಮಾರು ಗದ್ದೆಯಲ್ಲಿ ಸುಮಾರು ೨೮ ವರ್ಷ ಕೋಟಿಚೆನ್ನಯ ಕಂಬಳ ನಡೆಸಿಕೊಂಡು ಬರುತ್ತಿದ್ದೇವೆ. ಇವತ್ತು ದೇವರ ಮಾರು ಗದ್ದೆಯಲ್ಲಿ ಮತ್ತೊಮ್ಮೆ ಸಂಪ್ರದಾಯ ಮರುಕಳಿಸುತ್ತಿದೆ. ಇಂತಹ ವಿನೂತನ ಬೇಸಾಯ ಮಾಡದೇ ಇರುತ್ತಿದ್ದರೆ ಮುಂದೆ ಯಾವ ಮರದಲ್ಲಿ ಅಕ್ಕಿ ಆಗುವುದು ಎಂದು ಮಕ್ಕಳು ಕೇಳುವ ಸಂದರ್ಭ ಬರಬಹುದು. ಈ ನಿಟ್ಟಿನಲ್ಲಿ ವಿನೂತನ ಬೇಸಾಯ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗಲಿ. ಮಹಾಲಿಂಗೇಶ್ವರ ದೇವರಿಗೆ ನೈವೇಧ್ಯಕ್ಕೆ ಇದೇ ಗದ್ದೆಯಿಂದ ಸಮರ್ಪಣೆಯಾಗಲಿ ಎಂದರು.
ಆತ್ಮನಿರ್ಭರ ಭಾರತಕ್ಕೆ ಪೂರಕ ಕಾರ್ಯ:
ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಹಡಿಲು ಬಿದ್ದ ಗದ್ದೆಯಲ್ಲಿ ಬೇಸಾಯ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯರ ಆತ್ಮನಿರ್ಭರ ಭಾರತ ಚಿಂತನೆಗೆ ಸಹಕಾರ ನೀಡಿದಂತಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಅಂಗಳದಲ್ಲಿ ಅಕ್ಕಿ ಬೇಸಾಯದ ಉಸ್ತುವಾರಿ ವಹಿಸಿದ ಪ್ರಗತಿಪರ ಕೃಷಿಕ ಸುದೇಶ್ ನಾಕ್ ಚಿಕ್ಕಪುತ್ತೂರು, ಸೇವಾ ಭಾರತಿ ಪ್ರಮುಖ್ ರವೀಂದ್ರ ಪಿ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ಉದ್ಯಮಿ ಶಿವಪ್ರಸಾದ್ ರೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಪಿ.ಕೆ.ಗಣೇಶ್, ರಾಧಾಕೃಷ್ಣ ಗೌಡ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.