ಪುತ್ತೂರು : ಗ್ರಾಮವೊಂದು ಸುವ್ಯವಸ್ಥಿತವಾಗಿ ಇರಬೇಕೆಂದರೆ ಅಗತ್ಯ ಎನಿಸುವಂತಹ ಮೂಲಭೂತ ಅವಶ್ಯಕತೆಯಾದ ರಸ್ತೆ ಕೂಡಾ ಒಂದು.
ಯಾವುದೇ ರೀತಿಯ ಸಂಚಾರಕ್ಕೂ ರಸ್ತೆಯ ಪಾತ್ರ ಮಹತ್ತರವಾದುದು.ಆದರೆ ಯೋಚಿಸಿ..ಗ್ರಾಮವೊಂದಕ್ಕೆ ರಸ್ತೆ ವ್ಯವಸ್ಥೆಯೇ ಇಲ್ಲದಿದ್ದರೆ ಅಲ್ಲಿಯ ಪರಿಸ್ಥಿತಿ ಹೇಗಿರಬಹುದು? ಅನಾರೋಗ್ಯ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೂ ರಸ್ತೆಯೇ ಇಲ್ಲದಿದ್ದರೆ ಇದರ ಪರಿಣಾಮ ಏನಾಗಬಹುದು?. ಹೀಗೆ ಅರಿಯಡ್ಕ ಗ್ರಾಮದ ಶೇಖ್ ಮಲೆ ದಲಿತ ಕಾಲೋನಿಗೆ ಇಂತಹದ್ದೊಂದು ಸಮಸ್ಯೆ ತೀವ್ರವಾಗಿ ಕಳೆದ 15 ವರ್ಷಗಳಿಂದ ಬಾಧಿಸಿದೆ.. ಇಲ್ಲಿನ ಜನ ಇವತ್ತಿಗೂ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ.. ಇಲ್ಲಿ ತನಕ ಈ ರಸ್ತೆಯ ಕುರಿತಂತೆ ಎಷ್ಟೇ ಮನವಿ ಸಲ್ಲಿಸಿದರೂ ನಿರೀಕ್ಷಿತ ಪ್ರಗತಿ ಕಾಣಲೇ ಇಲ್ಲ.
ಆದರೆ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ರಣರಂಗದ ಪ್ರಚಾರ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದು, ಇದಕ್ಕೆ ಈ ರಸ್ತೆಯು ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ.
ರಸ್ತೆಯ ಅಭಿವೃದ್ಧಿಯ ಆಶ್ವಾಸನೆಯ ಕೂಗು ಜೋರಾಗಿ ಕೇಳಿಬರುತ್ತಿದ್ದು, ಆರೋಪ – ಪ್ರತ್ಯಾರೋಪ, ಸ್ಥಳ ವಿವಾದ ಎಲ್ಲಾ ವಿಚಾರಗಳೂ ಭುಗಿಲೆದ್ದಿವೆ. ಇದೇ ಕಾರಣಕ್ಕೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಕೂಡಾ ಇಲ್ಲಿ ಬಿದ್ದಿತ್ತು. ಇದರಿಂದ ಚುನಾವಣಾ ವಿಚಾರವಾಗಿ ಬಹಿಷ್ಕಾರದಿಂದ ಹೊರಬರಲು ಒಂದಷ್ಟು ತಂತ್ರಗಳು ಕೂಡಾ ರೂಪ ಪಡೆದುಕೊಂಡ ವಿಚಾರ ಇದೇ ಗ್ರಾಮಸ್ಥರಿಂದ ತಿಳಿದು ಬಂದಿದೆ. ಸದ್ಯ ಬ್ಯಾನರನ್ನು ಕೂಡಾ ತೆರವುಗೊಳಿಸಲಾಗಿದೆ.
ಇತ್ತ ಒಂದು ಕಡೆಯಿಂದ ಇಸುಬು ಹಾಜಿ ಅವರಿಗೆ ಸೇರಿದ ಖಾಸಗಿ ಸ್ಥಳವೊಂದರಲ್ಲಿ ಇರುವ ಕಾಲುದಾರಿಯಲ್ಲಿ ಅನ್ಯರಿಗೆ ಸಂಚರಿಸಲು ಅವಕಾಶ ನೀಡಲಾಗದು ಎಂಬ ಪ್ರಸ್ತಾಪವೊಂದಿತ್ತು. ಆದರೆ ಇದೀಗ “ಚುನಾವಣಾ ದಿನ ಸಮೀಪವಾಗುತ್ತಿದ್ದಂತೆ ಸ್ಥಳದತ್ತ ಭೇಟಿ ನೀಡಿ, ಕಾಲುದಾರಿಯ ಬಳಿ ಇರುವ ಬೇಲಿಯನ್ನು ಸರಿಸಿ, ಜನರ ನಂಬಿಕೆ ಗಳಿಸಲು ಸುಳ್ಳು ಭರವಸೆ ನೀಡಿದ್ದಾರೆ” ಎಂಬುದು ಹಲವರ ಆರೋಪವಾದರೆ, ಇನ್ನೊಂದು ಕಡೆಯಿಂದ “ರಸ್ತೆ ವಿಚಾರವಾಗಿ ಮನೆಯವರ ಬಳಿಯೇ ಚರ್ಚಿಸಲಾಗಿದೆ, ರಸ್ತೆಯಿರುವ ಜಾಗವು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಅದನ್ನು ತೆರವುಗೊಳಿಸುವುದು, ಅನುವು ನೀಡುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ನಮ್ಮ ಮನವಿಗೆ ಮನೆಯವರು ಕೂಡಾ ತನ್ನ ಸ್ಥಳವನ್ನು ಮುಂದಿನ ದಿನಗಳಲ್ಲಿ ಬಿಟ್ಟು ಕೊಡುವ ಭರವಸೆಯನ್ನು ನೀಡಿದ್ದಾರೆ” ಎಂದು ತಿಳಿಸಿದ್ದಾರೆ. ಸದ್ಯ ಬೇಲಿಯು ತೆರವಾಗಿದ್ದು ಮುಂದಿನ ದಿನಗಳಲ್ಲಿ ಇಸುಬು ಹಾಜಿ ಇವರು ತಮ್ಮ ರಸ್ತೆಯ ಜಾಗವನ್ನು ಕಾಲೊನಿ ಜನರ ಅನುಕೂಲಕ್ಕಾಗಿ ಬಿಟ್ಟು ಕೊಡುತ್ತಾರೋ ಅಥವಾ ರಸ್ತೈಯನ್ನು ಮುಚ್ಚುತ್ತಾರೋ?
ಖಾಸಗಿ ಜಾಗ ಕೊಡುವರೆಂಬ ಮಾತು ವ್ಯಕ್ತವಾದರೂ, ಈಗಾಗಲೇ ನಡೆದಾಡಲು 4 ಫೀಟ್ ದಾರಿಯಿದ್ದು, ರಿಕ್ಷಾ ಚಾಲನೆಗೆ ಮತ್ತೂ 1 ಫೀಟ್ ನೀಡುವುದಾಗಿ ಹೇಳಿದ್ದು,ಇಲ್ಲಿ ಯಾವುದೇ ರೀತಿಯ ದಾಖಲೆಗಳಿಲ್ಲ.. ದಾಖಲೆ ನೀಡಬೇಕಾಗಿದ್ದರೂ ಯಾವುದೇ ಆಧಾರಗಳು ಸಿಗದ ಕಾರಣ ಈ ಭರವಸೆ ಮುಂದೆ ಕಾರ್ಯಗತಗೊಳ್ಳಬಹುದೇ ಎಂಬುದೇ ಗೊಂದಲದ ವಿಚಾರವಾಗಿದೆ.
ಚುನಾವಣೆ ಬಳಿಕ ಇರುವ ಆಶ್ವಾಸನೆ ಈಡೇರುತ್ತದೆಯೋ? ಕಾದು ನೋಡಬೇಕಾಗಿದೆ. ಇವೆಲ್ಲದರ ನಡುವೆ ಶೇಖ್ ಮಲೆ ರಸ್ತೆ ವಿಚಾರ ಹಲವಾರು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.