ಪುತ್ತೂರು: ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ, ನೆಹರು ಯುವ ಕೇಂದ್ರ ಮಂಗಳೂರು, ಯುವ ಜನ ಒಕ್ಕೂಟ ಪುತ್ತೂರು ಹಾಗೂ ಅರಣ್ಯ ಗ್ರಾಮ ಸಮಿತಿ ಅರಿಯಡ್ಕ ವತಿಯಿಂದ ಸ್ವಚ್ಚ ಗ್ರಾಮ ಹಸಿರು ಗ್ರಾಮ-2021 ಕಾರ್ಯಕ್ರಮದಡಿಯಲ್ಲಿ ವನಮಹೋತ್ಸವ, ಸಸಿ ವಿತರಣೆ ಹಾಗೂ ಕನ್ನಡ ಮಾಧ್ಯಮ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವೂ ಮಜ್ಜಾರಡ್ಕ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಆ.15 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷರಾದ ರವಿ ಮಜ್ಜಾರ್ ವಹಿಸಿದ್ದರು. ಅರಣ್ಯ ಗ್ರಾಮ ಸಮಿತಿ ಅರಿಯಡ್ಕ ಇದರ ಅಧ್ಯಕ್ಷರಾದ ಲೋಕೇಶ್ ರೈ ಅಮೈ ಸಂಘಟನೆಯ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಕಳೆದ ವರ್ಷ ಸಸಿ ವಿತರಣೆ ಸಂದರ್ಭದಲ್ಲಿ ಹೇಳಿದಂತೆ ಯಾರು ಚೆನ್ನಾಗಿ ಗಿಡ ಪೋಷಣೆ ಮಾಡುತ್ತಾರೋ ಅವರಿಗೇ ಈ ಸಲ ಬಹುಮಾನ ಘೋಷಿಸಿದ್ದರು. ಉತ್ತಮವಾಗಿ ಪೋಷಣೆ ಮಾಡಿದ ಚೇತನ್ ಮಜ್ಜಾರ್ ಹಾಗೂ ಪುರುಷೋತ್ತಮ ಗೋಳ್ತಿಲ ಇವರಿಗೆ ಬಹುಮಾನ ವಿತರಿಸಿದರು.
ಪುಸ್ತಕಾ ವಿತರಣಾ ಸಂದರ್ಭದಲ್ಲಿ 95% ಮೇಲೆ ಅಂಕ ಪಡೆದ ಪ್ರತಿಯೊಬ್ಬರಿಗೂ 5000 ರೂ. ಮೊತ್ತವನ್ನು ಘೋಷಣೆ ಮಾಡಲಾಯಿತು. ಹಾಗೂ 1 ನೇ ತರಗತಿ ಯಿಂದ 10ನೇ ತರಗತಿಯ ಕೊಂಬರಡ್ಕ, ಕೊಲ್ಲಾಜೆ ಮಕ್ಕಳಿಗೆ ಸಂಘಟನೆ ವತಿಯಿಂದ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಮುಖ್ ನರಸಿಂಹ ಪೂಂಜಾ, ದಯಾನಂದ ರೈ ಕೊಲ್ಲಾಜೆ, ಭಾರತೀಯ ಜನತಾ ಪಾರ್ಟಿ 4ನೇ ವಾರ್ಡ್ ಅಧ್ಯಕ್ಷ ಶಿವರಾಮ ಪಾಟಾಳಿ ಅಮೈ, ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಮಣಿಯಾಣಿ ಉಪಸ್ಥಿತರಿದ್ದರು.
ಸಂಘಟನೆಯ ಸದಸ್ಯರಿಂದ ಕಳೆದ ವರ್ಷ ವನ ಮಹೋತ್ಸವ ಸಂದರ್ಭದಲ್ಲಿ ಮಜ್ಜಾರಡ್ಕದಲ್ಲಿ ನೆಟ್ಟ ಗಿಡದ ಬೇಲಿ ಹಾಗೂ ಸುತ್ತಮುತ್ತಲಿನ ಪೊದೆಗಳನ್ನು ಕತ್ತರಿಸಿ ಗಿಡದ ಬುಡಕ್ಕೆ ಹಾಕಿ ಪೋಷಣೆ ಮಾಡಲಾಯಿತು ಹಾಗೂ ಕೆಲವೊಂದು ಹೊಸ ಗಿಡಗಳನ್ನು ನೆಡಲಾಯಿತು. ಹರೀಶ್ ಸ್ವಾಮಿನಗರ ಪ್ರಾರ್ಥನೆ ಮಾಡಿದರು, ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ಸ್ವಾಗತಿಸಿದರು. ಉದಯ್ ಸ್ವಾಮಿನಗರ ಧನ್ಯವಾದ ಸಲ್ಲಿಸಿದರು.